
ನವದೆಹಲಿ: ಮುಂದಿನ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ 6.4ರಷ್ಟು ಇರುವ ನಿರೀಕ್ಷೆ ಇದೆ ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಸೋಮವಾರ ಹೇಳಿದೆ. ಇದು ಜಿ–20 ರಾಷ್ಟ್ರಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆ ಆಗಿರಲಿದೆ.
ದೇಶದಲ್ಲಿ ಜನರ ಖರೀದಿ ಸಾಮರ್ಥ್ಯ ಹೆಚ್ಚಳವಾಗಿದೆ. ಸರ್ಕಾರದ ನೀತಿ ನಿಯಮಗಳು ಮತ್ತು ಸದೃಢ ಬ್ಯಾಂಕಿಂಗ್ ವ್ಯವಸ್ಥೆಯು ಜಿಡಿಪಿ ಹೆಚ್ಚಳಕ್ಕೆ ನೆರವಾಗಲಿವೆ ಎಂದು ತಿಳಿಸಿದೆ.
ಬ್ಯಾಂಕ್‌ಗಳ ಆಸ್ತಿ ಗುಣಮಟ್ಟ ಉತ್ತಮವಾಗಿದೆ. ಎಂಎಸ್‌ಎಂಇ ವಲಯಕ್ಕೆ ನೀಡಿದ ಸಾಲದ ವಸೂಲಾತಿಯಲ್ಲಿ ಸಣ್ಣ ಪ್ರಮಾಣದ ಸಮಸ್ಯೆ ಕಾಣಬಹುದು. ಇದನ್ನು ಹೊರತುಪಡಿಸಿದರೆ, ಬ್ಯಾಂಕ್‌ಗಳು ಸಾಲದ ನಷ್ಟವನ್ನು ನಿಭಾಯಿಸಲು ಸಾಕಷ್ಟು ಸಂಪತ್ತನ್ನು ಹೊಂದಿವೆ ಎಂದು ಮೂಡೀಸ್ ಬ್ಯಾಂಕಿಂಗ್ ವ್ಯವಸ್ಥೆಯ ಮುನ್ನೋಟ ವರದಿಯಲ್ಲಿ ತಿಳಿಸಿದೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ದರ ಪರಿಷ್ಕರಣೆ ಆಗಿದೆ. ಅದಕ್ಕೂ ಮುಂಚಿತವಾಗಿ ವೈಯಕ್ತಿಕ ಆದಾಯ ತೆರಿಗೆಯ ಮಿತಿ ಹೆಚ್ಚಳ ಮಾಡಲಾಗಿದೆ. ಇವು ಗ್ರಾಹಕರ ಕೈಯಲ್ಲಿ ಹಣ ಉಳಿಯುವಂತೆ ಮಾಡಲಿವೆ ಮತ್ತು ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಿವೆ. ಈ ಕ್ರಮಗಳು ಬೆಳವಣಿಗೆಗೆ ಸಹಕಾರಿಯಾಗಿವೆ ಎಂದು ತಿಳಿಸಿದೆ.
ಕಳೆದ ತಿಂಗಳು ಸಂಸತ್ತಿನಲ್ಲಿ ಮಂಡನೆಯಾದ ಆರ್ಥಿಕ ಸಮೀಕ್ಷೆ ವರದಿಯು ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.8ರಿಂದ ಶೇ 7.2ರಷ್ಟಾಗಲಿದೆ ಎಂದು ಅಂದಾಜಿಸಿದೆ. ಮೂಡೀಸ್ ಅಂದಾಜು ಇದಕ್ಕಿಂತ ಕಡಿಮೆ ಇದೆ.
ಸರ್ಕಾರದ ಅಂದಾಜಿನ ಪ್ರಕಾರ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇ 7.4ರಷ್ಟಾಗುವ ನಿರೀಕ್ಷೆಯಿದೆ. 2024–25ರಲ್ಲಿ ಇದು ಶೇ 6.5ರಷ್ಟಾಗಿತ್ತು.
ಪ್ರಸ್ತುತ ಬ್ಯಾಂಕ್‌ಗಳ ಸಾಲದ ಬೆಳವಣಿಗೆ ದರ ಶೇ 10.6ರಷ್ಟಿದೆ. ಇದು ಮುಂದಿನ ಆರ್ಥಿಕ ವರ್ಷದಲ್ಲಿ ಶೇ 11ರಿಂದ ಶೇ 13ರಷ್ಟಾಗಬಹುದು ಎಂದು ಮೂಡಿಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.