ADVERTISEMENT

ಕಳಸ: ಕೆಂಪು ಅಡಿಕೆಗೆ ದಾಖಲೆ ಬೆಲೆ, ಕ್ವಿಂಟಲ್‌ಗೆ ₹55 ಸಾವಿರದ ಗಡಿ ದಾಟಿದ ಧಾರಣೆ

ರವಿ ಕೆಳಂಗಡಿ
Published 1 ಸೆಪ್ಟೆಂಬರ್ 2021, 19:44 IST
Last Updated 1 ಸೆಪ್ಟೆಂಬರ್ 2021, 19:44 IST
ಅಡಿಕೆ ಫಸಲು
ಅಡಿಕೆ ಫಸಲು   

ಕಳಸ: ಕೆಂಪು ಅಡಿಕೆಯ ಬೆಲೆಯು ಐದು ವರ್ಷಗಳಲ್ಲಿ ಗರಿಷ್ಠ ಮಟ್ಟ ತಲುಪಿದ್ದು, ಬೆಳೆಗಾರರು ಮತ್ತು ವ್ಯಾಪಾರಿಗಳಲ್ಲಿ ಸಂಚಲನ ಮೂಡಿಸಿದೆ.

ಮಲೆನಾಡಿನ ಪ್ರಮುಖ ಅಡಿಕೆ ಮಾರುಕಟ್ಟೆಯಾದ ಶಿವಮೊಗ್ಗದಲ್ಲಿ ಬುಧವಾರ ರಾಶಿ ಇಡಿ ಅಡಿಕೆ ಕ್ವಿಂಟಲ್‌ಗೆ ಗರಿಷ್ಠ ₹ 54,700ಕ್ಕೆ ಮಾರಾಟವಾಗಿದೆ. ಕಳಸದಲ್ಲಿ ಕೈ ವ್ಯಾಪಾರದಲ್ಲಿ ಇದು ₹ 55 ಸಾವಿರದ ಗಡಿ ದಾಟಿದೆ. ಸದ್ಯ ಕೆಂಪು ಅಡಿಕೆ ಸರಾಸರಿ ಬೆಲೆಯು ₹ 53,600 ಇದೆ.

‘ಹಸ’ (ಸರಕು) ಅಡಿಕೆಯ ಬೆಲೆಯು ಗರಿಷ್ಠ ₹ 76,000 ತಲುಪಿದೆ. ಬೆಟ್ಟೆ ಅಡಿಕೆಯು ₹ 53,600ಕ್ಕೆ ಮಾರಾಟ ಆಗಿದೆ. ಕಡಿಮೆ ಗುಣಮಟ್ಟದ ಗೊರಬಲು ಮಾದರಿ ಅಡಿಕೆಗೂ ₹ 39,500 ದರ ಬಂದಿದ್ದು, ಬೆಳೆಗಾರರಿಗೆ ಬಂಪರ್‌ ಬೆಲೆ ಲಭಿಸಿದಂತಾಗಿದೆ.

ADVERTISEMENT

‘ದೇಶದಲ್ಲಿ ಅಡಿಕೆ ಫಸಲು ಕಡಿಮೆಯಾಗಿರುವುದು,ಆಮದು ಅಡಿಕೆಗೆ ಗರಿಷ್ಠ ಬೆಲೆ ನಿಗದಿ ಮಾಡಿರುವುದು ಮತ್ತು ವಿದೇಶಗಳಿಂದ ಕಳ್ಳ ಸಾಗಾಣಿಕೆ ಮೂಲಕ ಬರುತ್ತಿದ್ದ ಅಡಿಕೆಗೆ ಕಡಿವಾಣ ಬಿದ್ದಿರುವುದರಿಂದ ಬೆಲೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ’ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

2016ರಲ್ಲಿ ಕೆಂಪು ಅಡಿಕೆ ಬೆಲೆ ಕ್ವಿಂಟಲ್‌ಗೆ ₹ 80 ಸಾವಿರದ ಗಡಿ ದಾಟಿ ದಾಖಲೆ ಬರೆದಿತ್ತು. ಆ ನಂತರ ದಾಖಲಾಗಿರುವ ಗರಿಷ್ಠ ಬೆಲೆ ಇದು. ‘ಈಗಿನ ಬೆಲೆ ಏರಿಕೆಯ ವೇಗ ಗಮನಿಸಿದರೆ ಹಿಂದಿನ ದಾಖಲೆ ಮಟ್ಟಕ್ಕೆ ಏರಿದರೂ ಅಚ್ಚರಿ ಇಲ್ಲ’ ಎನ್ನುತ್ತಾರೆ ಅಡಿಕೆ ವ್ಯಾಪಾರಿ ದಿಲೀಪ್.

‘ಅಡಿಕೆ ಬೆಲೆ ಗರಿಷ್ಠ ಎಲ್ಲಿಯವರೆಗೆ ಹೋಗುತ್ತದೆ ಎಂದು ನೋಡಲು ಪ್ರತಿ ವರ್ಷ 100 ಮೂಟೆ ಅಡಿಕೆ ಇಟ್ಟುಕೊಂಡು ಕಾಯುವ ಪ್ರವೃತ್ತಿ ಬೆಳೆಸಿಕೊಂಡಿದ್ದೇನೆ’ ಎಂದು ಬೆಳೆಗಾರ ಕೃಷ್ಣ ಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.