ADVERTISEMENT

‘ಎಂಎಸ್‌ಎಂಇ’ ಸಾಲ ವಸೂಲಿಗೆ ಅವಸರ ಬೇಡ:ಬ್ಯಾಂಕ್‌ಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 4:52 IST
Last Updated 12 ಸೆಪ್ಟೆಂಬರ್ 2019, 4:52 IST
   

ನವದೆಹಲಿ: ಸಣ್ಣ ಉದ್ದಿಮೆಗಳ ಸಾಲ ವಸೂಲಾತಿಗೆ ಅವಸರ ಮಾಡಬಾರದು ಎಂದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ ಕೇಳಿಕೊಂಡಿದೆ.

ಆರ್ಥಿಕತೆಯು ಮಂದಗತಿಯಲ್ಲಿ ಸಾಗಿರುವುದರಿಂದ ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳ ಸಾಲ ಮರುಪಾವತಿ ಸಾಮರ್ಥ್ಯವು ಕಡಿಮೆಯಾಗಿದೆ. ಹೀಗಾಗಿ ನಿಧಾನವಾಗಿ ಸಾಲ ವಸೂಲಾತಿ ಮಾಡಬೇಕು ಎಂದು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.

ಸರಕು ಮತ್ತು ಸೇವೆಗಳ ಉಪಭೋಗದಲ್ಲಿನ ಕುಸಿತವು ಮನೆ ಮತ್ತು ವಾಹನಗಳ ಬೇಡಿಕೆಯನ್ನಷ್ಟೇ ತಗ್ಗಿಸಿಲ್ಲ. ಗ್ರಾಹಕ ಬಳಕೆ ಸರಕುಗಳು ಮತ್ತು ‘ಎಂಎಸ್‌ಎಂಇ’ ಕೈಗಾರಿಕೆಗಳು ತಯಾರಿಸುವ ಸರಕುಗಳ ಬೇಡಿಕೆಯನ್ನೂ ಕುಗ್ಗಿಸಿದೆ. ಹೀಗಾಗಿ ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಈ ವಲಯದ ಕೈಗಾರಿಕೆಗಳಿಂದ ಸಾಲ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಬಾರದು. ₹ 5 ಕೋಟಿಗಿಂತ ಕಡಿಮೆ ಮೊತ್ತದ ‘ಎಂಎಸ್‌ಎಂಇ’ ಸಾಲದ ಮರುಪಾವತಿಯು ನಿಗದಿಯಂತೆ ಇರದಿದ್ದರೆ ಅದನ್ನು ವಸೂಲಾಗದ ಸಾಲ (ಎನ್‌ಪಿಎ) ಎಂದು ಪರಿಗಣಿಸಬಾರದು ಎಂದು ಸರ್ಕಾರವು ಬ್ಯಾಂಕ್‌ಗಳಿಗೆ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಎಂಎಸ್‌ಎಂಇ’ ವಲಯಕ್ಕೆ ಅಕ್ಟೋಬರ್‌ 1ರಿಂದ ರೆಪೊ, ಟ್ರೆಷರಿ ಬಿಲ್‌ ದರ ಆಧರಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂದು ಆರ್‌ಬಿಐ ಇತ್ತೀಚಿಗೆ ಹೊರಡಿಸಿದ್ದ ಸುತ್ತೋಲೆ ಬೆನ್ನಲ್ಲೇ, ಸಾಲ ವಸೂಲಾತಿ ಪ್ರಕ್ರಿಯೆ ನಿಧಾನಗೊಳಿಸಲು ಕೇಳಿಕೊಳ್ಳಲಾಗಿದೆ. ಜತೆಗೆ, ‘ಎಂಎಸ್‌ಎಂಇ’ ವಲಯಕ್ಕೆ ಸಾಲ ಮಂಜೂರಾತಿ ತ್ವರಿತಗೊಳಿಸಬೇಕು ಎಂದೂ ಸೂಚಿಸಿದೆ.

ಮುದ್ರಾ ಎನ್‌ಪಿಎ: ಮುದ್ರಾ ಸಾಲಗಳಲ್ಲಿ ‘ಎನ್‌ಪಿಎ’ ಹೆಚ್ಚುತ್ತಿರುವುದರಿಂದ ಈ ಸಾಲಗಳನ್ನು ಪರಾಮರ್ಶಿಸಲು ಹಣಕಾಸು ಸಚಿವಾಲಯವು ಬ್ಯಾಂಕ್‌ಗಳಿಗೆ ಕೇಳಿಕೊಂಡಿದೆ.

‘ಮುದ್ರಾ’ ಸಾಲದ ಎನ್‌ಪಿಎ

ಅವಧಿ;ಮೊತ್ತ (₹ ಕೋಟಿಗಳಲ್ಲಿ)

2019ರ ಮಾರ್ಚ್‌;17,250

2018ರ ಮಾರ್ಚ್‌;7,277

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.