ADVERTISEMENT

ಆದ್ಯತೆ ಮೇರೆಗೆ ಎಂಎಸ್‌ಎಂಇ ಬಾಕಿ ಪಾವತಿಸಿ: ಸಚಿವಾಲಯ ಸೂಚನೆ

ಪಿಟಿಐ
Published 14 ಸೆಪ್ಟೆಂಬರ್ 2020, 13:00 IST
Last Updated 14 ಸೆಪ್ಟೆಂಬರ್ 2020, 13:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ನೀಡಬೇಕಿರುವ ಬಾಕಿಯನ್ನು ಆದ್ಯತೆಯ ಮೇರೆಗೆ ಪಾವತಿಸುವಂತೆ ಎಂಎಸ್‌ಎಂಇ ಸಚಿವಾಲಯವು ಕಾರ್ಪೊರೇಟ್ ಕಂಪನಿಗಳಿಗೆ ಸೂಚನೆ ನೀಡಿದೆ.

ಬಾಕಿ ಮೊತ್ತ ಪಾವತಿಸುವುದರಿಂದ ವಲಯದ ಕಾರ್ಯಾಚರಣೆ ಮತ್ತು ಕೆಲಸಗಾರರ ಜೀವನ ನಿರ್ವಹಣೆಗೆ ಅನುಕೂಲ ಆಗಲಿದೆ ಎಂದೂ ಸಚಿವಾಲಯ ಹೇಳಿದೆ.

ಈ ಸಂಬಂಧ ದೇಶದ ಮುಂಚೂಣಿ 500 ಕಂಪನಿಗಳ ಮಾಲೀಕರು ಅಥವಾ ಕಂಪನಿಗಳ ಉನ್ನತಾಧಿಕಾರಿಗಳಿಗೆ ಸಚಿವಾಲಯವು ಇ–ಮೇಲ್‌ ಕಳುಹಿಸಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಬಾಕಿ ಮೊತ್ತವನ್ನು ಪಾವತಿಸುವುದರಿಂದ ಜೀವನೋಪಾಯಕ್ಕಾಗಿ ಎಂಎಸ್‌ಎಂಇ ವಲಯವನ್ನು ನಂಬಿಕೊಂಡಿರುವ ಲಕ್ಷಗಟ್ಟಲೆ ಜನರಿಗೆ ತುಸು ನೆಮ್ಮದಿ ಸಿಗಲಿದೆ. ಇನ್ನುಳಿದ ಕಂಪನಿಗಳನ್ನೂ ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕಿಸಿ ಬಾಕಿ ಪಾವತಿಸುವಂತೆ ಕೇಳಲಾಗುವುದು ಎಂದು ಸಚಿವಾಲಯ ಹೇಳಿದೆ.

ವಿವಿಧ ಸಚಿವಾಲಯಗಳು ಹಾಗೂ ಕೇಂದ್ರೋದ್ಯಮಗಳು ಎಂಎಸ್‌ಎಂಇ ವಲಯಕ್ಕೆ ಸುಮಾರು ₹ 10 ಸಾವಿರ ಕೋಟಿ ಪಾವತಿ ಮಾಡಬೇಕಿದೆ.

ಟ್ರೇಡ್‌ ರಿಸಿವೇಬಲ್ಸ್‌ ಡಿಸ್ಕೌಂಟಿಂಗ್‌ ಸಿಸ್ಟಮ್‌ ಫ್ಲ್ಯಾಟ್‌ಫಾರ್ಮ್‌ನಲ್ಲಿ (ಟಿಆರ್‌ಇಡಿಎಸ್‌) ವಹಿವಾಟು ನಡೆಸುವಂತೆ ಕಾರ್ಪೊರೇಟ್‌ ಕಂಪನಿಗಳಿಗೆ ಸಚಿವಾಲಯವು ಮನವಿ ಮಾಡಿದೆ.

₹ 500 ಕೋಟಿಗಿಂತಲೂ ಹೆಚ್ಚಿನ ವಾರ್ಷಿಕ ವಹಿವಾಟು ನಡೆಸುವ ಕೇಂದ್ರೋದ್ಯಮಗಳು ಮತ್ತು ಕಾರ್ಪೊರೇಟ್‌ಗಳಿಗೆ ಟಿಆರ್‌ಇಡಿಎಸ್‌ನಲ್ಲಿ ವಹಿವಾಟು ನಡೆಸುವುದನ್ನು ಸಚಿವಾಲಯವು 2018ರಲ್ಲಿ ಕಡ್ಡಾಯ ಮಾಡಿದೆ.

ಎಂಎಸ್‌ಎಂಇಗಳಿಗೆ ನೀಡಬೇಕಿರುವ ಬಾಕಿಗೆ ಸಂಬಂಧಿಸಿದಂತೆ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯಕ್ಕೆ ಅರ್ಧವಾರ್ಷಿಕ ವರದಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕಂಪನಿಗಳಿಗೆ ಸಚಿವಾಲಯವು ನೆನಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.