ಬೆಂಗಳೂರು: ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ತೊಗರಿ ಮತ್ತು ಕಡಲೆ ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಪ್ರತಿ ಕ್ವಿಂಟಲ್ ತೊಗರಿಗೆ ₹7,550 ಹಾಗೂ ಕಡಲೆಗೆ ₹5,650 ಬೆಂಬಲ ಬೆಲೆ ನಿಗದಿಪಡಿಸಿದೆ.
ರಾಜ್ಯದಲ್ಲಿ 15.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತಿದೆ. ಅಂದಾಜು 11.96 ಲಕ್ಷ ಟನ್ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ. ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ ಬೆಳಗಾವಿ, ಬಳ್ಳಾರಿ, ವಿಜಯನಗರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಲು ಸಿದ್ಧತೆ ನಡೆದಿದೆ.
‘ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರವು 3,06,150 ಟನ್ ತೊಗರಿ ಖರೀದಿಗೆ ಅನುಮತಿ ನೀಡಿದೆ’ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಕಡಲೆ ಎಷ್ಟು ಖರೀದಿ?: ಪ್ರಸ್ತುತ 10.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗುತ್ತಿದ್ದು, 6.63 ಲಕ್ಷ ಟನ್ ಉತ್ಪಾದನೆಯನ್ನು ಅಂದಾಜಿಸಲಾಗಿದೆ.
ಧಾರವಾಡ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಗದಗ, ಬೆಳಗಾವಿ, ವಿಜಯಪುರ ಕಲಬುರಗಿ, ಯಾದಗಿರಿ, ಬೀದರ್, ಬಾಗಲಕೋಟೆ, ದಾವಣಗೆರೆ, ಚಿಕ್ಕಮಗಳೂರು ಮತ್ತು ರಾಯಚೂರು ಜಿಲ್ಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬೆಂಬಲ ಬೆಲೆಯಲ್ಲಿ 96,498 ಮೆಟ್ರಿಕ್ ಟನ್ ಕಡಲೆ ಖರೀದಿ ಮಾಡಲಾಗುವುದು. ನೋಂದಣಿ ಮತ್ತು ಖರೀದಿ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.