ADVERTISEMENT

ಆರ್‌ಐಎಲ್‌: ಹಕ್ಕಿನ ಷೇರು ಖರೀದಿಸಿದ ಮುಕೇಶ್‌

ಪ್ರವರ್ತಕರ ಪಾಲು ಹೆಚ್ಚಳ

ಪಿಟಿಐ
Published 11 ಜೂನ್ 2020, 10:51 IST
Last Updated 11 ಜೂನ್ 2020, 10:51 IST
ಮುಕೇಶ್‌ ಅಂಬಾನಿ
ಮುಕೇಶ್‌ ಅಂಬಾನಿ   

ನವದೆಹಲಿ: ಕೋಟ್ಯಧಿಪತಿ ಮುಕೇಶ್‌ ಅಂಬಾನಿ ಅವರು ತಮ್ಮ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ನ (ಆರ್‌ಐಎಲ್‌) ಹಕ್ಕಿನ ಷೇರು ನೀಡಿಕೆಯಲ್ಲಿ 5.52 ಲಕ್ಷ ಷೇರುಗಳನ್ನು ಪಡೆದುಕೊಂಡಿದ್ದಾರೆ.

ಕಂಪನಿಯಲ್ಲಿನ ಅವರ ಷೇರುಗಳ ಸಂಖ್ಯೆಯು ಈಗ 80.52 ಲಕ್ಷಕ್ಕೆ (ಶೇ 0.12) ತಲುಪಿದೆ. ಮುಕೇಶ್‌ ಪತ್ನಿ ನೀತಾ, ಮಕ್ಕಳಾದ ಇಷಾ, ಆಕಾಶ್‌ ಮತ್ತು ಅನಂತ್‌ ಅವರು ಕೂಡ ತಲಾ 5.52 ಲಕ್ಷ ಷೇರುಗಳನ್ನು ಪಡೆದುಕೊಂಡಿದ್ದಾರೆ. ಪ್ರವರ್ತಕರ ತಂಡವು ಒಟ್ಟಾರೆ 27.60 ಲಕ್ಷ ಹಕ್ಕಿನ ಷೇರುಗಳನ್ನು ಪಡೆದುಕೊಂಡಂತೆ ಆಗಿದೆ.

ಈಗ ಕಂಪನಿಯಲ್ಲಿನ ಪ್ರವರ್ತಕರ ಪಾಲು ಶೇ 50.29ಕ್ಕೆ ತಲುಪಿದೆ. ಇದಕ್ಕೂ ಮೊದಲು ಇದು ಶೇ 50.07ರಷ್ಟಿತ್ತು. ಸಾರ್ವಜನಿಕರ ಪಾಲು ಶೇ 49.93 ರಿಂದ ಶೇ 49.71ಕ್ಕೆ ಇಳಿದಿದೆ.

ADVERTISEMENT

ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮ (ಎಲ್‌ಐಸಿ) 2.47 ಕೋಟಿ ಷೇರುಗಳನ್ನು ಖರೀದಿಸಿದ್ದು ಕಂಪನಿಯಲ್ಲಿನ ಪಾಲು ಈಗ ಶೇ 6ಕ್ಕೆ ಏರಿದೆ.

ಕಂಪನಿಯು ₹ 53,124 ಕೋಟಿ ಮೊತ್ತದ ಬಂಡವಾಳ ಸಂಗ್ರಹಿಸಲು 1:15 ಅನುಪಾತದಲ್ಲಿ ಹಕ್ಕಿನ ಷೇರು ನೀಡಿಕೆಯನ್ನು ಏಪ್ರಿಲ್‌ನಲ್ಲಿ ಪ್ರಕಟಿಸಿತ್ತು. ಇದು 30 ವರ್ಷಗಳಲ್ಲಿನ ದೇಶದ ಅತಿದೊಡ್ಡ ಹಕ್ಕಿನ ಷೇರು ನೀಡಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.