ADVERTISEMENT

ಜಿಯೊ ಫೈಬರ್‌: ಮಲ್ಟಿಪ್ಲೆಕ್ಸ್‌,ಡಿಟಿಎಚ್‌ ಮೇಲೆ ಪರಿಣಾಮ?

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 20:30 IST
Last Updated 14 ಆಗಸ್ಟ್ 2019, 20:30 IST
   

ನವದೆಹಲಿ (ಪಿಟಿಐ): ಮನರಂಜನೆ, ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಹುಟ್ಟುಹಾಕುವ ಭಾರಿ ನಿರೀಕ್ಷೆ ಮೂಡಿಸಿರುವ ರಿಲಯನ್ಸ್‌ನ ಜಿಯೊ ಫೈಬರ್‌ ಸೇವೆಯು, ಮನೆಗೆ ನೇರ ಪ್ರಸಾರ (ಡಿಟಿಎಚ್‌) ಮತ್ತು ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ ವಹಿವಾಟಿನ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಹೊಸ ಚಲನಚಿತ್ರಗಳುಬಿಡುಗಡೆಯಾಗುವ ದಿನವೇ ಮನೆಯಲ್ಲಿಯೇ ವೀಕ್ಷಿಸುವ ಸೌಲಭ್ಯವು ಜಿಯೊ ಫೈಬರ್‌ನ ಪ್ರೀಮಿಯಂ ಕೊಡುಗೆಯಲ್ಲಿ ಇರುವುದರಿಂದ ತಮ್ಮ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮ ಬೀರದು ಎಂದು ಮಲ್ಟಿಪ್ಲೆಕ್ಸ್‌ ಸಂಸ್ಥೆಗಳು ಪ್ರತಿಕ್ರಿಯಿಸಿವೆ. ಈ ಸೇವೆಯು 2020ರ ಮಧ್ಯಭಾಗದಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಈ ಮಧ್ಯೆ,ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶಿಸುವ ಪಿವಿಆರ್‌ ಮತ್ತು ಐನಾಕ್ಸ್‌ ಲೆಸರ್‌ನ ಷೇರುಗಳ ಬೆಲೆ ಕುಸಿದಿದೆ.

ಥೇಟರ್‌ಗಳಲ್ಲಿ ಮತ್ತು ಮನೆಯಲ್ಲಿ ಕುಳಿತು ಸಿನಿಮಾ ವೀಕ್ಷಿಸುವುದು ಎರಡೂ ಸಂಪೂರ್ಣವಾಗಿ ಪ್ರತ್ಯೇಕ ಅನುಭವ
ಗಳಾಗಿರುತ್ತವೆ ಎಂದು ದೇಶದಾದ್ಯಂತ ಇರುವ ಮಾಲ್‌ಗಳಲ್ಲಿ 800 ಸ್ಕ್ರೀನ್‌ಗಳನ್ನು ಹೊಂದಿರುವ ಪಿವಿಆರ್‌ ಸಿನಿಮಾಸ್‌ ತಿಳಿಸಿದೆ.

ADVERTISEMENT

ಥೇಟರ್‌ಗಳಲ್ಲಿ ಹೊಸ ಸಿನಿಮಾ ಬಿಡುಗಡೆಯಾದ ಎಂಟು ವಾರಗಳ ನಂತರವೇ ಟಿವಿ ಸೇರಿದಂತೆ ಬೇರೆ ಮಾಧ್ಯಮಗಳಲ್ಲಿ ಪ್ರದರ್ಶಿಸಲು ಚಲನಚಿತ್ರ ನಿರ್ಮಾಪಕರು, ವಿತರಕರು ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರು ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಇದು ಮಲ್ಟಿಪ್ಲೆಕ್ಸ್‌ಗಳ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದುಐನಾಕ್ಸ್‌ ಲೆಸರ್‌ ಅಭಿಪ್ರಾಯಪಟ್ಟಿದೆ.

ನಕಲಿ ತಾಣ ಹಾವಳಿ

ಜಿಯೊ ಫೈಬರ್‌ನ ಆಕರ್ಷಕ ಸೌಲಭ್ಯಗಳ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಅಂತರ್ಜಾಲ ತಾಣದಲ್ಲಿ ಕೆಲ ನಕಲಿ ಸಂಸ್ಥೆಗಳು ಹುಟ್ಟಿಕೊಂಡು ಗ್ರಾಹಕರಿಗೆ ಮೋಸ ಮಾಡಲು ಹೊರಟಿವೆ.jiofiber.org,gigafiber.jio.com ಹೆಸರಿನ ತಾಣಗಳು ಗ್ರಾಹಕರ ನೋಂದಣಿ ಹೆಸರಿನಲ್ಲಿ ವಿಳಾಸ, ಮೊಬೈಲ್‌ ಮತ್ತಿತರ ವಿವರ ಪಡೆಯಲು ಹವಣಿಸುತ್ತಿವೆ. ಈ ಬಗ್ಗೆ ಬಳಕೆದಾರರು ಜಾಗ್ರತೆಯಿಂದ ಇರಬೇಕು. https://www.jio.com ಮಾತ್ರ ಜಿಯೊದ ಅಧಿಕೃತ ತಾಣವಾಗಿದೆ ಎಂದು ರಿಲಯನ್ಸ್‌ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.