ADVERTISEMENT

ಭಾರತ್‌ ಬ್ರ್ಯಾಂಡ್‌ | 10 ಸಾವಿರ ಟನ್‌ ಅಕ್ಕಿ ಮಾರಾಟ ಗುರಿ: ನಾಫೆಡ್‌

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 23:52 IST
Last Updated 4 ಮಾರ್ಚ್ 2024, 23:52 IST
‘ಭಾರತ್‌ ಬ್ರ್ಯಾಂಡ್‌’ ಅಕ್ಕಿ
‘ಭಾರತ್‌ ಬ್ರ್ಯಾಂಡ್‌’ ಅಕ್ಕಿ   

ಬೆಂಗಳೂರು: ಪ್ರಸಕ್ತ ತಿಂಗಳಿನಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 1 ಲಕ್ಷ ಕ್ವಿಂಟಲ್‌ (10 ಸಾವಿರ ಟನ್) ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಮಾರಾಟಕ್ಕೆ ನಾಫೆಡ್‌ ನಿರ್ಧರಿಸಿದೆ. 

ದೇಶದಲ್ಲಿ ಫೆಬ್ರುವರಿಯಲ್ಲಿ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಮಾರಾಟಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ಪ್ರತಿ ಕೆ.ಜಿ ಅಕ್ಕಿಗೆ ₹29 ದರ ನಿಗದಿಪಡಿಸಲಾಗಿದ್ದು, ನಾಫೆಡ್‌, ಎನ್‌ಸಿಸಿಎಫ್‌ ಹಾಗೂ ಕೇಂದ್ರೀಯ ಭಂಡಾರವು ನೋಡಲ್‌ ಏಜೆನ್ಸಿಯಾಗಿವೆ.

ರಾಜ್ಯದಲ್ಲಿ ಇಲ್ಲಿಯವರೆಗೆ ನಾಫೆಡ್‌ ಮೂಲಕ 2,800 ಟನ್‌ ಅಕ್ಕಿ ಮಾರಾಟ ಮಾಡಲಾಗಿದೆ. 

ADVERTISEMENT

ಬೆಂಗಳೂರಿನಲ್ಲಿರುವ ನಾಫೆಡ್‌ ಕಚೇರಿಯಲ್ಲಿ ಮಾರಾಟಕ್ಕೆ ಒಂದು ಮಳಿಗೆ ತೆರೆಯಲಾಗಿದೆ. ಇದರ ಹೊರತಾಗಿ ರಾಜ್ಯದಲ್ಲಿ ಎಲ್ಲಿಯೂ ಪ್ರತ್ಯೇಕ ಮಾರಾಟ ಮಳಿಗೆಗಳನ್ನು ತೆರೆದಿಲ್ಲ. ವಾಹನಗಳ ಮೂಲಕ ಮಾರಾಟ ಮಾಡಲಾಗುತ್ತಿದೆ.

ವಿಳಂಬ ಏಕೆ?:

‘ಭಾರತೀಯ ಆಹಾರ ನಿಗಮದ ಮೂಲಕ ಅಕ್ಕಿಯನ್ನು ಎತ್ತುವಳಿ ಮಾಡಿದ ಬಳಿಕ ಸಂಸ್ಕರಿಸಲಾಗುತ್ತದೆ. ನಂತರ ಪ್ಯಾಕೆಟ್‌ಗಳನ್ನು ಮಾಡಲಾಗುತ್ತದೆ. ಹಾಗಾಗಿ, ಮಾರಾಟಕ್ಕೆ ವಿಳಂಬವಾಗುತ್ತಿದೆ’ ಎಂದು ನಾಫೆಡ್‌ನ ರಾಜ್ಯ ಮುಖ್ಯಸ್ಥೆ ಜ್ಯೋತಿ ಪಾಟೀಲ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ಅಕ್ಕಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ, ಬಡಾವಣೆಗಳು ಅಥವಾ ಗ್ರಾಮಗಳಿಗೆ ಮಾರಾಟದ ವಾಹನಗಳು ತೆರಳಿದ ವೇಳೆ ಒಂದು ಅಥವಾ ಎರಡು ಗಂಟೆಯೊಳಗೆ ಅಕ್ಕಿ ಖಾಲಿಯಾಗುತ್ತಿದೆ. ಕೆಲವೊಮ್ಮೆ ಮುಂದಿನ ಸ್ಥಳಗಳಿಗೆ ಮಾರಾಟಕ್ಕೆ ತೆರಳಲು ವಾಹನಗಳಲ್ಲಿ ಅಕ್ಕಿ ಸಂಗ್ರಹ ಇರುವುದಿಲ್ಲ’ ಎಂದರು.

‘ಪ್ಯಾಕೆಟ್‌ಗಳ ಮೇಲೆ ಮುದ್ರಿತವಾಗಿರುವ ದಿನಾಂಕಕ್ಕೂ ಮೊದಲೇ ಅಕ್ಕಿ ಮಾರಾಟಕ್ಕೆ ಅವಕಾಶವಿಲ್ಲ. ಅಂತಹ ಪ್ರಕರಣಗಳ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಇ–ಕಾಮರ್ಸ್‌ನಲ್ಲಿ ಲಭ್ಯ:

ಇ–ಕಾರ್ಮಸ್‌ ವೇದಿಕೆಗಳಲ್ಲೂ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ದೊರೆಯಲಿದೆ. ಸದ್ಯ ರಿಲಯನ್ಸ್‌ ರಿಟೇಲ್‌‌ ಮಳಿಗೆಗಳು ಮತ್ತು ಸ್ಟಾರ್‌ ಬಜಾರ್‌ನಲ್ಲಿ ದೊರೆಯುತ್ತಿದೆ. ಬ್ಲಿಂಕಿಟ್‌ ಹಾಗೂ ಬಿಗ್‌ಬಾಸ್ಕೆಟ್‌ ಜೊತೆಗೆ ಒಪ್ಪಂದ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.