ADVERTISEMENT

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ 25 ಕೋಟಿ ಚಂದಾದಾರರ ಸೇರ್ಪಡೆ ಗುರಿ: ರಾಮನ್

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 15:24 IST
Last Updated 18 ಡಿಸೆಂಬರ್ 2025, 15:24 IST
ಶಿವಸುಬ್ರಮಣಿಯನ್ ರಾಮನ್
ಶಿವಸುಬ್ರಮಣಿಯನ್ ರಾಮನ್   

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (ಎನ್‌ಪಿಎಸ್‌) ವ್ಯಾಪ್ತಿಗೆ ಖಾಸಗಿ ವಲಯದ 25 ಕೋಟಿ ಹೊಸ ಚಂದಾದಾರರನ್ನು ಸೇರಿಸುವ ಗುರಿ ಹೊಂದಲಾಗಿದೆ‌ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಅಧ್ಯಕ್ಷ ಶಿವಸುಬ್ರಮಣಿಯನ್ ರಾಮನ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಕಸಿತ ಭಾರತ ದೃಷ್ಟಿಕೋನಕ್ಕೆ ಅನುಗುಣವಾಗಿ ಎನ್‌ಪಿಎಸ್‌ ವಿಸ್ತರಿಸಲು ಉದ್ದೇಶಿಸಲಾಗಿದೆ. ಎನ್‌ಪಿಎಸ್ ಅಡಿಯಲ್ಲಿ ಸಂಗ್ರಹವಾಗುವ ಹಣವನ್ನು ಪ್ರಮುಖ ಮೂಲಸೌಕರ್ಯ ಮತ್ತು ಕಾರ್ಪೊರೇಟ್ ಯೋಜನೆಗಳಿಗೆ ಬಳಸಲಾಗುವುದು. ಚಂದಾದಾರರ ಉಳಿತಾಯವನ್ನು ಹೂಡಿಕೆಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, ಇದಕ್ಕಾಗಿ ಹೂಡಿಕೆ ಮಾರ್ಗಸೂಚಿಗಳನ್ನು ಬದಲಾಯಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.

ಪ್ರಸ್ತುತ, ಎನ್‌ಪಿಎಸ್‌ ಮತ್ತು ಅಟಲ್‌ ಪಿಂಚಣಿ ಯೋಜನೆಯ (ಎಪಿವೈ) ಸಂಪತ್ತಿನ ಮೌಲ್ಯವು (ಎಯುಎಂ) ₹16 ಲಕ್ಷ ಕೋಟಿ ದಾಟಿದೆ. ಈ ಪೈಕಿ ಶೇ 50ರಷ್ಟು ಮೊತ್ತ ಸರ್ಕಾರಿ ಸಾಲಪತ್ರಗಳಲ್ಲಿ, ಶೇ 23ರಷ್ಟನ್ನು ಕಾರ್ಪೊರೇಟ್ ಸಾಲಪತ್ರಗಳಲ್ಲಿ, ಶೇ 18ರಷ್ಟನ್ನು ಷೇರುಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದರು.

ADVERTISEMENT

ಎನ್‌ಪಿಎಸ್‌ ಸುಧಾರಣೆಗಳ ಮೂಲಕ ವ್ಯವಸ್ಥೆಯನ್ನು ಹೆಚ್ಚು ಗ್ರಾಹಕಸ್ನೇಹಿ ಆಗಿಸಲಾಗಿದ್ದು, ಎಲ್ಲ ವರ್ಗದವರು ಎನ್‌ಪಿಎಸ್‌ ಪಡೆಯುವಂತೆ ಮಾಡಲಾಗಿದೆ. ಚಂದಾದಾರರು 15 ವರ್ಷಗಳ ನಂತರ ತಮ್ಮ ಹೂಡಿಕೆಯ ಶೇ 80ರವರೆಗಿನ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ ಎಂದು ತಿಳಿಸಿದರು.

ರೈತ ಉತ್ಪಾದಕ ಸಂಸ್ಥೆಗಳು, ಎಂಎಸ್‌ಎಂಇ ವಲಯದಲ್ಲಿನ ಕಾರ್ಮಿಕರನ್ನು ಸಹ ಎನ್‌ಪಿಎಸ್‌ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಅಲ್ಲದೆ, ವಿವಿಧ ಫಿನ್‌ಟೆಕ್‌ ವೇದಿಕೆಗಳಲ್ಲಿ ಸಹ ಎನ್‌ಪಿಎಸ್‌ ಲಭ್ಯವಾಗುವಂತೆ ಮಾಡಲು ಫಿನ್‌ಟೆಕ್‌ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

ಜೊಮಾಟೊ ಕಂಪನಿಯು ತನ್ನ ನೌಕರರಿಗೆ ಎನ್‌ಪಿಎಸ್‌ ಆರಂಭಿಸಿದೆ. ಸ್ವಿಗ್ಗಿ ಓಲಾ ಮತ್ತು ಉಬರ್‌ ಕಂಪನಿಗಳು ಎನ್‌ಪಿಎಸ್ ಕುರಿತು ಮಾತುಕತೆ ನಡೆಸುತ್ತಿದ್ದು ಸ್ವಿಗ್ಗಿ ಮಾತುಕತೆ ಅಂತಿಮ ಹಂತದಲ್ಲಿದೆ.
ಶಿವಸುಬ್ರಮಣಿಯನ್ ರಾಮನ್ ಅಧ್ಯಕ್ಷ ಪಿಎಫ್‌ಆರ್‌ಡಿಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.