ಸಾಂದರ್ಭಿಕ ಚಿತ್ರ
ರಾಯಿಟರ್ಸ್ ಚಿತ್ರ
ಚಂಡೀಗಢ: ‘ತ್ಯಾಜ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ರೊಟವೇಟರ್, ಕಲ್ಟಿವೇಟರ್ ಸೇರಿದಂತೆ ಹತ್ತು ಕೃಷಿ ಉಪಕರಣಗಳ ಮೇಲೆ ವಿಧಿಸಲಾಗುವ ಜಿಎಸ್‌ಟಿಗೆ ವಿನಾಯ್ತಿ ನೀಡಬೇಕು’ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೃಷಿ ಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಪತ್ರ ಬರೆದಿರುವ ಸೈನಿ, ‘ರಾಷ್ಟ್ರದ ಆಹಾರ ದಾಸ್ತಾನಿನಲ್ಲಿ ಹರಿಯಾಣದ ಪಾತ್ರ ಮಹತ್ವದ್ದು. ಕೃಷಿ ಕ್ಷೇತ್ರದಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಆದರೆ ಕೃಷಿ ತ್ಯಾಜ್ಯವನ್ನು ಸುಡುವುದು ಇತ್ತೀಚಿನ ದಿನಗಳಲ್ಲಿ ಪಿಡುಗಾಗಿದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ’ ಎಂದಿದ್ದಾರೆ.
‘ಕೃಷಿ ತ್ಯಾಜ್ಯ ನಿರ್ವಹಣೆಯನ್ನೂ ಒಳಗೊಂಡಂತೆ ಹರಿಯಾಣದ ರೈತರು ಆಧುನಿಕ ತಂತ್ರಜ್ಞಾನಗಳನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಂತ್ರಗಳ ಖರೀದಿಗೆ ಸಬ್ಸಿಡಿ ನೀಡುತ್ತಲೇ ಬಂದಿವೆ. ಇದರಿಂದಾಗಿ ತ್ಯಾಜ್ಯಗಳನ್ನು ಸುಡುವ ಪ್ರಮಾಣ 2024ರಲ್ಲಿ ಶೇ 39ರಷ್ಟು ಕಡಿಮೆಯಾಗಿದೆ. 2025ಕ್ಕೆ ಸರ್ಕಾರವು ಕಾರ್ಯಯೋಜನೆ ಸಿದ್ಧಪಡಿಸಿದೆ. ತ್ಯಾಜ್ಯ ನಿರ್ವಹಣೆ ಯಂತ್ರಗಳ ಖರೀದಿಗಾಗಿಯೇ ಸರ್ಕಾರ ₹200 ಕೋಟಿ ಮೀಸಲಿಟ್ಟಿದೆ’ ಎಂದು ಸೈನಿ ಹೇಳಿದ್ದಾರೆ.
‘ಇಂಥ ಯಂತ್ರಗಳ ಒಟ್ಟು ಖರೀದಿಗೆ ₹500 ಕೋಟಿ ಆಗಲಿದೆ. ಜತೆಗೆ ಶೇ 12ರಂತೆ ₹60 ಕೋಟಿ ಜಿಎಸ್‌ಟಿ ಹೊರೆಯೂ ರೈತರ ಮೇಲೆ ಬೀಳಲಿದೆ. ಹೀಗಾಗಿ ರೊಟವೇಟರ್, ಡಿಸ್ಕ್ ಹಾರೋಸ್, ಕಲ್ಟಿವೇಟರ್, ಝೀರೊ ಡ್ರಿಲ್ಸ್, ಸೂಪರ್ ಸೀಡರ್, ಸ್ಟ್ರಾ ಬೇಲರ್ಸ್, ಹೇ ರೇಕ್ಸ್, ಸ್ಲಾಶಹರ್, ರೀಪರ್, ಬೈಂಡರ್ ಮತ್ತು ಟ್ರ್ಯಾಕ್ಟರ್‌ಗೆ ಅಳವಡಿಸುವ ಸ್ಪೇಯರ್ ಪಂಪ್‌ಗಳಿಗೆ ಜಿಎಸ್‌ಟಿ ವಿನಾಯ್ತಿ ನೀಡಬೇಕು. ಇದರಿಂದ ಪರಿಸರ ಉಳಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.