ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ 1ರಿಂದ ಜೂನ್ 19ರ ವರೆಗೆ ದೇಶದ ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ ಶೇ 1.39ರಷ್ಟು ಇಳಿಕೆಯಾಗಿದ್ದು, ₹4.59 ಲಕ್ಷ ಕೋಟಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
2024–25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹವು ₹4.65 ಲಕ್ಷ ಕೋಟಿಯಷ್ಟಿತ್ತು. ಮುಂಗಡ ತೆರಿಗೆ ಸಂಗ್ರಹವು ಮಂದಗೊಂಡಿರುವುದು ಮತ್ತು ಮರುಪಾವತಿ ಹೆಚ್ಚಳವಾಗಿರುವುದೇ ಸಂಗ್ರಹ ಇಳಿಕೆಗೆ ಕಾರಣ ಎಂದು ತಿಳಿಸಿದೆ.
ಮುಂಗಡ ತೆರಿಗೆ ಸಂಗ್ರಹದಲ್ಲಿ ಶೇ 3.87ರಷ್ಟು ಮಾತ್ರ ಹೆಚ್ಚಳವಾಗಿದ್ದು, ₹1.56 ಲಕ್ಷ ಕೋಟಿಯಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಮುಂಗಡ ತೆರಿಗೆ ಸಂಗ್ರಹವು ಶೇ 27ರಷ್ಟು ಏರಿಕೆ ದಾಖಲಿಸಿತ್ತು. ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಶೇ 5ರಷ್ಟು ಕಡಿಮೆಯಾಗಿದ್ದು, ₹1.73 ಲಕ್ಷ ಕೋಟಿಯಾಗಿದೆ.
ವೈಯಕ್ತಿಕ ಆದಾಯ ತೆರಿಗೆಯನ್ನು ಒಳಗೊಂಡಿರುವ ಕಾರ್ಪೊರೇಟ್‌ಯೇತರ ತೆರಿಗೆ ಸಂಗ್ರಹವು ₹2.73 ಲಕ್ಷ ಕೋಟಿಯಾಗಿದ್ದು, ಶೇ 0.7ರಷ್ಟು ಏರಿಕೆಯಾಗಿದೆ. ಷೇರು ವಹಿವಾಟು ತೆರಿಗೆಯ ಪ್ರಮಾಣದಲ್ಲಿ ಶೇ 12ರಷ್ಟು ಹೆಚ್ಚಳವಾಗಿದ್ದು, ₹13,013 ಕೋಟಿಯಾಗಿದೆ. ಮರುಪಾವತಿ (ರೀಫಂಡ್) ಶೇ 58ರಷ್ಟು ಏರಿಕೆಯಾಗಿದ್ದು, ₹86,385 ಕೋಟಿಯಾಗಿದೆ ಎಂದು ತಿಳಿಸಿದೆ.
ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಒಟ್ಟು ನೇರ ತೆರಿಗೆ ಸಂಗ್ರಹದಲ್ಲಿ ಶೇ 4.86ರಷ್ಟು ಏರಿಕೆಯಾಗಿದ್ದು, ₹5.45 ಲಕ್ಷ ಕೋಟಿಯಾಗಿದೆ. ಕಾರ್ಪೊರೇಟ್ ತೆರಿಗೆಯಲ್ಲಿ ಮುಂಗಡ ತೆರಿಗೆ ಸಂಗ್ರಹವು ₹1.22 ಲಕ್ಷ ಕೋಟಿಯಾಗಿದೆ. ಕಾರ್ಪೊರೇಟ್‌ಯೇತರ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಿದ್ದು, ₹33,928 ಕೋಟಿಯಾಗಿದೆ ಎಂದು ತಿಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು, ನೇರ ತೆರಿಗೆ ಮೂಲಕ ₹25.20 ಲಕ್ಷ ಕೋಟಿ ಸಂಗ್ರಹಿಸಲು ಗುರಿ ಹೊಂದಿದೆ. ಇದು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 12.7ರಷ್ಟು ಹೆಚ್ಚಳ. ಈ ಪೈಕಿ ಜೂನ್ 19ರ ವರೆಗೆ ಶೇ 18.21ರಷ್ಟು ತೆರಿಗೆ ಸಂಗ್ರಹಿಸಿದೆ. ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಮೂಲಕ ₹78 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.