
ನವದೆಹಲಿ: ಟಾಟಾ ಸನ್ಸ್‌ನಲ್ಲಿ ದೊಡ್ಡ ಷೇರುಪಾಲು ಹೊಂದಿರುವ ‘ಸರ್ ದೊರಾಬ್ಜಿ ಟಾಟಾ ಟ್ರಸ್ಟ್’ ನಿರ್ದೇಶಕರನ್ನಾಗಿ ನೆವಿಲ್ ಟಾಟಾ ಮತ್ತು ಭಾಸ್ಕರ ಭಟ್ ಅವರನ್ನು ನೇಮಕ ಮಾಡಲಾಗಿದೆ.
ನೆವಿಲ್ ಅವರು ಟಾಟಾ ಟ್ರಸ್ಟ್ಸ್‌ನ ಅಧ್ಯಕ್ಷ ನೋಯಲ್ ಟಾಟಾ ಅವರ ಮಗ. ಭಟ್ ಅವರು ಟಾಟಾ ಸಮೂಹದ ಟೈಟನ್ ಕಂಪನಿಯ ಎಂ.ಡಿ ಆಗಿದ್ದರು.
ಟಾಟಾ ಸಮೂಹದ ಸರಿಸುಮಾರು 400 ಕಂಪನಿಗಳನ್ನು ಟಾಟಾ ಸನ್ಸ್ ನಿಯಂತ್ರಿಸುತ್ತದೆ. ಟಾಟಾ ಸನ್ಸ್‌ನಲ್ಲಿ ಟಾಟಾ ಟ್ರಸ್ಟ್ಸ್ ಒಟ್ಟು ಶೇ 65.4ರಷ್ಟು ಪಾಲು ಹೊಂದಿವೆ. ಈ ಪೈಕಿ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ (ಎಸ್‌ಡಿಟಿಟಿ) ಶೇ 28ರಷ್ಟು ಪಾಲು ಹೊಂದಿದೆ. ಟಾಟಾ ಸನ್ಸ್‌ನಲ್ಲಿ ಸರ್ ರತನ್ ಟಾಟಾ ಟ್ರಸ್ಟ್‌ನ (ಎಸ್‌ಆರ್‌ಟಿಟಿ) ಪಾಲು ಶೇ 23.6ರಷ್ಟಿದೆ.
ನೆವಿಲ್ ಮತ್ತು ಭಟ್ ಅವರನ್ನು ‘ಎಸ್‌ಆರ್‌ಟಿಟಿ’ಗೆ ನೇಮಕ ಮಾಡುವ ನೋಯಲ್ ಟಾಟಾ ಪ್ರಯತ್ನಕ್ಕೆ ಫಲ ದೊರೆತಿಲ್ಲ ಎಂದು ಮೂಲಗಳು ಹೇಳಿವೆ. ಎಸ್‌ಆರ್‌ಟಿಟಿ ಟ್ರಸ್ಟಿ ಆಗಿರುವ ವೇಣು ಶ್ರೀನಿವಾಸನ್ ಅವರು ಆಕ್ಷೇಪ ಎತ್ತಿದ ಕಾರಣದಿಂದಾಗಿ ಹೀಗಾಯಿತು ಎಂದು ಗೊತ್ತಾಗಿದೆ.
ನೇಮಕ ಪ್ರಸ್ತಾವವನ್ನು ಮುಂದಕ್ಕೆ ತಂದ ಬಗೆಯ ಕುರಿತು ಶ್ರೀನಿವಾಸನ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ‘ಎಸ್‌ಡಿಟಿಟಿ’ಗೆ ಇವರನ್ನು ನೇಮಕ ಮಾಡುವ ಪ್ರಸ್ತಾವನೆಯು ಅಜೆಂಡಾದಲ್ಲಿ ಇತ್ತು. ಆದರೆ ‘ಎಸ್‌ಆರ್‌ಟಿಟಿ’ಗೆ ಇವರನ್ನು ನೇಮಕ ಮಾಡುವ ಉಲ್ಲೇಖವು ಅಜೆಂಡಾದಲ್ಲಿ ಇರಲಿಲ್ಲ ಎಂದು ಮೂಲಗಳು ವಿವರಿಸಿವೆ. ಟಾಟಾ ಟ್ರಸ್ಟ್ಸ್ ಮತ್ತು ಶ್ರೀನಿವಾಸನ್ ಅವರಿಂದ ಈ ಕುರಿತು ಪ್ರತಿಕ್ರಿಯೆ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.