ADVERTISEMENT

ಅಗರಬತ್ತಿಗೆ ಹೊಸ ಬಿಐಎಸ್‌: ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ

ಪಿಟಿಐ
Published 26 ಡಿಸೆಂಬರ್ 2025, 16:32 IST
Last Updated 26 ಡಿಸೆಂಬರ್ 2025, 16:32 IST
ಅಗರಬತ್ತಿ
ಅಗರಬತ್ತಿ   

ನವದೆಹಲಿ: ಗ್ರಾಹಕರ ಸುರಕ್ಷತೆಗಾಗಿ ಅಗರಬತ್ತಿಗಳಿಗೆ ಮೀಸಲಾದ ‘ಐಎಸ್‌ 19412:2025’ ಅನ್ನು ಭಾರತೀಯ ಮಾನಕ ಬ್ಯೂರೊ (ಬಿಐಎಸ್‌) ರೂಪಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಅಗರಬತ್ತಿಗಳ ತಯಾರಿಕೆಯಲ್ಲಿ ಕೆಲವು ಕೀಟನಾಶಕ ರಾಸಾಯನಿಕಗಳನ್ನು ನಿಷೇಧಿಸುವ ಮೂಲಕ ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗರಬತ್ತಿ ಮಾರುಕಟ್ಟೆಗೆ ಉತ್ತೇಜನ ನೀಡಲು ಹೊಸ ಮಾನದಂಡವನ್ನು ಹೊರತರಲಾಗಿದೆ ಎಂದು ತಿಳಿಸಿದೆ.

‘ಐಎಸ್‌ 19412:2025’ ಅಗರಬತ್ತಿಗಳಿಗೆ ಮೀಸಲಾದ ಹೊಸ ಮಾನದಂಡವಾಗಿದೆ. ಈ ಮಾನದಂಡವು, ಗ್ರಾಹಕರಿಗೆ ಗುಣಮಟ್ಟದ ಅಗರಬತ್ತಿ ಆಯ್ಕೆಗೆ ನೆರವು ನೀಡಲಿದೆ ಎಂದು ತಿಳಿಸಿದೆ. 

ADVERTISEMENT

ಭಾರತೀಯ ಮಾನಕ ಬ್ಯೂರೊ ಅಗರಬತ್ತಿಗಳು ಅಥವಾ ಧೂಪದ್ರವ್ಯ ತಯಾರಿಕೆಯಲ್ಲಿ ಬಳಸಲು ನಿಷೇಧಿಸಲಾದ ವಸ್ತುಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ ಅಲೆಥ್ರಿನ್, ಪರ್ಮೆಥ್ರಿನ್, ಸೈಪರ್ಮೆಥ್ರಿನ್, ಡೆಲ್ಟಾಮೆಥ್ರಿನ್ ಮತ್ತು ಫಿಪ್ರೊನಿಲ್‌ ನಂತಹ ಕೆಲವು ಕೀಟನಾಶಕ ರಾಸಾಯನಿಕಗಳು ಹಾಗೂ ಬೆಂಜೈಲ್ ಸೈನೈಡ್, ಈಥೈಲ್ ಅಕ್ರಿಲೇಟ್ ಮತ್ತು ಡೈಫೆನಿಲಮೈನ್ ಸಹ ಸೇರಿವೆ.

ಮಾನವನ ಆರೋಗ್ಯ, ತಯಾರಿಕಾ ಘಟಕಗಳ ಒಳಾಂಗಣದಲ್ಲಿ ಗಾಳಿಯ ಗುಣಮಟ್ಟ ಮತ್ತು ಪರಿಸರ ಸುರಕ್ಷತೆಯ ಮೇಲೆ ಇವು ಪರಿಣಾಮ ಬೀರುವುದರಿಂದ ಇವುಗಳಲ್ಲಿ ಹಲವು ವಸ್ತುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಬಂಧಿಸಲಾಗಿದೆ ಅಥವಾ ನಿಷೇಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಕ್ರಮವು ಗ್ರಾಹಕರಲ್ಲಿ ವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ತಯಾರಿಕ ಘಟಕಗಳು ನೈತಿಕ ಮತ್ತು ಸುಸ್ಥಿರ ತಯಾರಿಕಾ ಚಟುವಟಿಕೆ ಅನುಸರಿಸುವಂತೆ ಮಾಡಲಿವೆ ಎಂದು ತಿಳಿಸಿದೆ.

ಭಾರತವು, ಜಗತ್ತಿನಲ್ಲಿ ಅತಿಹೆಚ್ಚು ಅಗರಬತ್ತಿಗಳನ್ನು ಉತ್ಪಾದನೆ ಮತ್ತು ರಫ್ತು ಮಾಡುವ ರಾಷ್ಟ್ರವಾಗಿದ್ದು, ದೇಶದ ಅಗರಬತ್ತಿ ಉದ್ಯಮದ ಮೌಲ್ಯವು ₹8 ಸಾವಿರ ಕೋಟಿಯಷ್ಟಿದೆ. ಈ ಪೈಕಿ ₹1,200 ಕೋಟಿ ಮೌಲ್ಯದಷ್ಟು ಅಗರಬತ್ತಿಗಳನ್ನು 150ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅಮೆರಿಕ, ಮಲೇಷ್ಯಾ, ನೈಜೀರಿಯಾ, ಬ್ರೆಜಿಲ್ ಮತ್ತು ಮೆಕ್ಸಿಕೊ ಪ್ರಮುಖ ಮಾರುಕಟ್ಟೆಗಳಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.