ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ (ಬಿಒಬಿ), 444 ದಿನಗಳಿಗೆ ಶೇ 7.15ರಷ್ಟು ಬಡ್ಡಿದರ ಒದಗಿಸುವ ‘ಬಾಬ್ ಸ್ಕ್ವೇರ್ ಡ್ರೈವ್ ಡೆಪಾಸಿಟ್ ಸ್ಕೀಂ’ ಅನ್ನು ಪರಿಚಯಿಸಿದೆ.
ಇದು ಹೊಸ ಚಿಲ್ಲರೆ ಠೇವಣಿ ಯೋಜನೆಯಾಗಿದೆ. ಇದರಡಿ ನಾಗರಿಕರಿಗೆ ವಾರ್ಷಿಕ ಶೇ 7.15, ಹಿರಿಯ ನಾಗರಿಕರಿಗೆ ಶೇ 7.65, 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಶೇ 7.75ರಷ್ಟು ಬಡ್ಡಿದರ ನಿಗದಿಪಡಿಸಿದೆ. ನಿಶ್ಚಿತ ಠೇವಣಿಗೆ ಶೇ 7.80ರಷ್ಟು ಬಡ್ಡಿದರ ನೀಡಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
ಈ ಯೋಜನೆಯು ಠೇವಣಿದಾರರಿಗೆ ಉತ್ತಮ ಬಡ್ಡಿ ಸೌಲಭ್ಯ ಒದಗಿಸುತ್ತದೆ. ಜೊತೆಗೆ ಸ್ಥಿರ ಮತ್ತು ಉತ್ತಮ ಆದಾಯ ಗಳಿಸಲು ನೆರವಾಗಲಿದೆ. ಆಸಕ್ತ ಗ್ರಾಹಕರು ಬ್ಯಾಂಕ್‌ನ ಡಿಜಿಟಲ್ ವ್ಯವಸ್ಥೆಗಳಾದ ಟಾಬ್ ವರ್ಲ್ಡ್ ಆಪ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಅಥವಾ ಬ್ಯಾಂಕ್ ಆಫ್ ಬರೋಡಾದ ಯಾವುದೇ ಶಾಖೆಯಲ್ಲಿ ನಿಶ್ಚಿತ ಠೇವಣಿ ತೆರೆಯಬಹುದು ಎಂದು ತಿಳಿಸಿದೆ.
ಹೊಸ ಗ್ರಾಹಕರು ಉಳಿತಾಯ ಖಾತೆ ತೆರೆಯದೆ ಬ್ಯಾಂಕ್ ಆಫ್ ಬರೋಡಾ ವೆಬ್‌ಸೈಟ್‌ನಲ್ಲಿ ವಿಡಿಯೊ ಕೆವೈಸಿ ಮೂಲಕ ನಿಶ್ಚಿತ ಠೇವಣಿಯಲ್ಲಿ ಹಣ ಹೂಡಿಕೆ ಮಾಡಬಹುದಾಗಿದೆ ಎಂದು ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕಿ ಬೀನಾ ವಹೀದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.