ADVERTISEMENT

ಹೊಸ ವಿದೇಶ ವ್ಯಾಪಾರ ನೀತಿ ಅನಾವರಣ

2030ರ ವೇಳೆಗೆ ₹164 ಲಕ್ಷ ಕೋಟಿ ಮೊತ್ತದ ರಫ್ತು ವಹಿವಾಟು ಗುರಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 19:23 IST
Last Updated 31 ಮಾರ್ಚ್ 2023, 19:23 IST
   

ನವದೆಹಲಿ: ಕೇಂದ್ರ ಸರ್ಕಾರವು ಹೊಸ ವಿದೇಶ ವ್ಯಾಪಾರ ನೀತಿಯನ್ನು ಶುಕ್ರವಾರ ಅನಾವರಣಗೊಳಿಸಿದೆ. 2030ರ ವೇಳೆಗೆ ದೇಶದ ಸರಕು ಮತ್ತು ಸೇವೆಗಳ ರಫ್ತು ಮೊತ್ತವನ್ನು 2 ಟ್ರಿಲಿಯನ್ ಡಾಲರ್‌ಗೆ (₹ 164 ಲಕ್ಷ ಕೋಟಿ) ತಲುಪಿಸುವ ಉದ್ದೇಶವನ್ನು ಇದು ಹೊಂದಿದೆ. ದೇಶದ ಸರಕು ಮತ್ತು ಸೇವೆಗಳ ರಫ್ತು ಮೊತ್ತವು ಈಗ 760 ಬಿಲಿಯನ್ ಡಾಲರ್ (₹ 62 ಲಕ್ಷ ಕೋಟಿ). ವಿಶೇಷ ಎಂದರೆ, ಈ ನೀತಿಯು ಯಾವಾಗ ಕೊನೆಗೊಳ್ಳುತ್ತದೆ ಎಂಬ ಉಲ್ಲೇಖ ಇಲ್ಲ.

ಹೊಸ ನೀತಿಯು ಶನಿವಾರದಿಂದ ಜಾರಿಗೆ ಬರುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವಿದೇಶ ವ್ಯಾಪಾರ ನೀತಿಯನ್ನು ಐದು ವರ್ಷಗಳ ಅವಧಿಗೆ ಜಾರಿಗೊಳಿಸುವ ಪದ್ಧತಿಯನ್ನು ಈ ನೀತಿಯ ಮೂಲಕ ಕೊನೆಗೊಳಿಸಿದಂತಾಗಿದೆ. ಹೊಸ ನೀತಿಯನ್ನು ಅಗತ್ಯ ಎದುರಾದಾಗಲೆಲ್ಲ ಪರಿಷ್ಕರಿಸಲಾಗುತ್ತದೆ ಎಂದು ಇದನ್ನು ಅನಾವರಣ ಮಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ತಿಳಿಸಿದರು.

ಹೊಸ ನೀತಿಯು ಭಾರತದಿಂದ ಆಗುವ ರಫ್ತುಗಳು ಡಬ್ಲ್ಯುಟಿಒ ನಿರ್ದೇಶನಗಳಿಗೆ ಅನುಗುಣವಾಗಿರುವಂತೆ ಮಾಡಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದು ಸಿರಿಲ್‌ ಅಮರ್‌ಚಂದ್ ಮಂಗಲದಾಸ್ ಕಂಪನಿಯ ಪಾಲುದಾರ ವಿಜಯ್ ಪ್ರತಾಪ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ADVERTISEMENT

‘ಅಭಿವೃದ್ಧಿ ಹೊಂದಿದ ದೇಶಗಳು ಹಾಗೂ ಅಭಿವೃದ್ಧಿ ಹೊಂದಿದ ಪ್ರದೇಶಗಳ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಭಾರತ ನಡೆಸುತ್ತಿರುವ ಪ್ರಯತ್ನಗಳಿಗೆ ಈ ನೀತಿಯು ಪೂರಕವಾಗಿದೆ’ ಎಂದು ಕೂಡ ಚೌಹಾಣ್ ಹೇಳಿದ್ದಾರೆ.

ವಿದೇಶ ವ್ಯಾಪಾರ ನೀತಿಯ ಅಡಿಯಲ್ಲಿ ನೀಡುವ ಪ್ರಯೋಜನಗಳನ್ನು ಇ–ವಾಣಿಜ್ಯ ವೇದಿಕೆಗಳ ಮೂಲಕ ಆಗುವ ರಫ್ತುಗಳಿಗೂ ವಿಸ್ತರಿಸಲಾಗಿದೆ. ‘ರಫ್ತು ವಹಿವಾಟಿನಲ್ಲಿ ಹೆಚ್ಚು ಅವಕಾಶಗಳಿರುವ ಇ–ವಾಣಿಜ್ಯ ಮತ್ತು ಹಸಿರು ಇಂಧನ ವಲಯಗಳ ಮೇಲೆ ನೀತಿಯು ಹೆಚ್ಚು ಆದ್ಯತೆ ನೀಡಿದೆ’ ಎಂದು ಇಇಪಿಸಿ ಇಂಡಿಯಾ ಅಧ್ಯಕ್ಷ ಅರುಣ್ ಕುಮಾರ್ ಗರೋಡಿಯಾ ಹೇಳಿದ್ದಾರೆ.

ವಾಣಿಜ್ಯ ಇಲಾಖೆಯನ್ನು ಪುನರ್‌ರಚಿಸಬೇಕು ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸಲು ಅದು ಸಜ್ಜಾಗಿರುವಂತೆ ಮಾಡಬೇಕು ಎಂದು ನೀತಿಯು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.