ADVERTISEMENT

ಎಟಿಎಂನಿಂದ ಹಣ ಪಡೆಯಲು ವಂಚಕರಿಂದ ಹೊಸ ತಂತ್ರ

ಪಿಟಿಐ
Published 18 ಏಪ್ರಿಲ್ 2021, 20:27 IST
Last Updated 18 ಏಪ್ರಿಲ್ 2021, 20:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಎಟಿಎಂಗಳಿಂದ ಅಕ್ರಮವಾಗಿ ಹಣ ಪಡೆಯಲು ಸೈಬರ್‌ ಅಪರಾಧಿಗಳು ಹೊಸ ಕಾರ್ಯತಂತ್ರ ಅನುಸರಿಸುತ್ತಿದ್ದಾರೆ. ಹೀಗಾಗಿ ನೆಟ್‌ವರ್ಕ್‌ನಲ್ಲಿ ಎಂಡ್‌–ಟು–ಎಂಡ್‌ ಎನ್‌ಕ್ರಿಪ್ಷನ್‌ ವ್ಯವಸ್ಥೆಯ ಮೂಲಕ ಎಟಿಎಂಗಳಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಂತೆ ಎಲ್ಲಾ ಬ್ಯಾಂಕ್‌ಗಳಿಗೂ ಸರ್ಕಾರ ಸೂಚನೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೈಬರ್‌ ಅಪರಾಧಿಗಳು ಎಟಿಎಂಗಳಿಂದ ಹಣ ಪಡೆಯಲು ಹೊಸ ತರಹದ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎನ್ನುವುದು ಸುರಕ್ಷತಾ ಏಜೆನ್ಸಿಗಳು ನಡೆಸಿರುವ ತನಿಖೆಯಿಂದ ತಿಳಿದುಬಂದಿದೆ ಎಂದು ಈ ಕುರಿತು ಮಾಹಿತಿ ಇರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆಯ ಪ್ರಕಾರ, ವಂಚಕರು ಮೊದಲು ಎಟಿಎಂನ ನೆಟ್‌ವರ್ಕ್‌ (ಲ್ಯಾನ್‌) ಕೇಬಲ್‌ ಅನ್ನು ಬದಲಿಸುತ್ತಾರೆ. ಹೀಗೆ ಮಾಡಿ, ಎಟಿಎಂ ಸ್ವಿಚ್‌ನಿಂದ ಹೊರಡುವ ‘ಹಣ ಕೊಡಲು ನಿರಾಕರಿಸುವ’ ಸಂದೇಶಗಳನ್ನೇ ಬದಲಾಯಿಸಿ, ಅವು ‘ಹಣ ನೀಡುವ ಸಂದೇಶ’ವಾಗಿ ಬದಲಾಗುವಂತೆ ಮಾಡಿ ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ.

ADVERTISEMENT

ಅಪರಾಧಿಗಳು ಎಟಿಎಂ ಯಂತ್ರ ಇರುವ ಜಾಗದಲ್ಲಿನ ರೂಟರ್‌ ಅಥವಾ ಸ್ವಿಚ್‌ ಮಧ್ಯೆ ಒಂದು ಸಾಧನವನ್ನು ಜೋಡಿಸುತ್ತಾರೆ. ನೆಟ್‌ವರ್ಕ್‌ ಮೂಲಕ ಎಟಿಎಂಗೆ ಸಂಪರ್ಕ ಹೊಂದಿರುವ ಅಧಿಕೃತ ಹೋಸ್ಟ್‌ನಿಂದ (ಎಟಿಎಂ ಸ್ವಿಚ್‌) ಪ್ರತಿಕ್ರಿಯೆಗಳನ್ನು ಮಾರ್ಪಡಿಸುವ ಸಾಮರ್ಥ್ಯವನ್ನು ಈ ಸಾಧನ ಹೊಂದಿರುತ್ತದೆ. ಬಳಿಕ ವಂಚಕರು ನಿರ್ಬಂಧಿತ ಅಥವಾ ಬ್ಲಾಕ್‌ ಆಗಿರುವ ಕಾರ್ಡ್‌ಗಳನ್ನು ಬಳಸಿ ಎಟಿಎಂನಲ್ಲಿ ಹಣ ಪಡೆಯುವ ಪ್ರಕ್ರಿಯೆ ನಡೆಸುತ್ತಾರೆ. ಆಗ ಎಟಿಎಂ ಅದನ್ನು ನಿರಾಕರಿಸುತ್ತದೆ. ಆಗ ಈ ಸಾಧನದ ಮೂಲಕ ವಂಚಕರು ಹಣ ಪಡೆಯಲು ಅನುಮತಿ ನೀಡುವಂತೆ ಸಂದೇಶವನ್ನು ಮಾರ್ಪಡಿಸಿ, ಹಣ ದೋಚುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.