ADVERTISEMENT

ರೂಪಾಯಿಯಲ್ಲಿ ವಹಿವಾಟು: ವಿಶೇಷ ಖಾತೆ ತೆರೆದ ರಷ್ಯಾ ಬ್ಯಾಂಕ್‌

ಪಿಟಿಐ
Published 16 ನವೆಂಬರ್ 2022, 11:30 IST
Last Updated 16 ನವೆಂಬರ್ 2022, 11:30 IST

ನವದೆಹಲಿ: ವಿದೇಶಗಳ ಜೊತೆ ರೂಪಾಯಿಯಲ್ಲಿ ವಹಿವಾಟು ನಡೆಸಲು ಒಂಬತ್ತು ವಿಶೇಷ ಖಾತೆಗಳನ್ನು ಆರಂಭಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅನುಮೋದನೆ ಕೊಟ್ಟ ನಂತರ ದೇಶದ ಎರಡು ಬ್ಯಾಂಕ್‌ಗಳಲ್ಲಿ ಒಂಬತ್ತು ಖಾತೆಗಳನ್ನು ತೆರೆಯಲಾಗಿದೆ.

ರಷ್ಯಾದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಬರ್‌ಬ್ಯಾಂಕ್‌ ಮತ್ತು ಎರಡನೆಯ ಅತಿದೊಡ್ಡ ಬ್ಯಾಂಕ್‌ ಆಗಿರುವ ವಿಟಿಬಿ ಬ್ಯಾಂಕ್‌ ವಿಶೇಷ ಖಾತೆಗಳನ್ನು ತೆರೆಯಲು ಅನುಮತಿ ಪಡೆದ ಮೊದಲ ವಿದೇಶಿ ಬ್ಯಾಂಕ್‌ಗಳಾಗಿವೆ. ರಷ್ಯಾದ ಗಾಜ್‌ಪ್ರಮ್‌ ಬ್ಯಾಂಕ್‌ ಭಾರತದಲ್ಲಿ ಶಾಖೆ ಹೊಂದಿರದಿದ್ದರೂ ಯುಕೊ ಬ್ಯಾಂಕ್‌ನಲ್ಲಿ ತನ್ನ ವಿಶೇಷ ಖಾತೆಯನ್ನು ತೆರೆದಿದೆ.

‘ಯುಕೊ, ಸ್ಬರ್‌, ವಿಟಿಬಿ ಹಾಗೂ ಇಂಡಸ್‌ಇಂಡ್‌ ಬ್ಯಾಂಕ್‌ಗಳಲ್ಲಿ ವಿಶೇಷ ಖಾತೆಗಳನ್ನು ತೆರೆಯಲಾಗಿದೆ’ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಭಾರ್ತ್‌ವಾಲ್ ತಿಳಿಸಿದ್ದಾರೆ. ಒಂಬತ್ತು ವಿಶೇಷ ಖಾತೆಗಳನ್ನು ತೆರೆದಿರುವ ಕಾರಣ ಭಾರತ ಮತ್ತು ರಷ್ಯಾ ನಡುವಿನ ವಹಿವಾಟುಗಳಿಗೆ ರೂಪಾಯಿಯಲ್ಲಿ ಹಣ ಪಾವತಿ ಸಾಧ್ಯವಾಗಲಿದೆ.

ADVERTISEMENT

ಆಮದು ಮತ್ತು ರಫ್ತು ವಹಿವಾಟುಗಳ ಪಾವತಿಯು ರೂಪಾಯಿಯಲ್ಲಿ ಆಗುವುದನ್ನು ಹೆಚ್ಚಿಸುವಂತೆ ಆರ್‌ಬಿಐ ದೇಶದ ಬ್ಯಾಂಕ್‌ಗಳ ಆಡಳಿತ ಮಂಡಳಿಗಳಿಗೆ ಹಾಗೂ ವರ್ತಕರ ಸಂಘದ ಪ್ರತಿನಿಧಿಗಳಿಗೆ ಹೇಳಿತ್ತು.

ರಷ್ಯಾದ ಜೊತೆ ರೂಪಾಯಿಯಲ್ಲಿಯೇ ವಹಿವಾಟು ನಡೆಸುವುದಕ್ಕೆ ಇನ್ನೂ ಕೆಲವು ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿವೆ. ಅವು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿವೆ ಎಂದು ಭಾರ್ತ್‌ವಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.