ಬೆಂಗಳೂರು: ‘ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ರೂಪಿಸಲು ಎಲ್ಲರ ಪ್ರಯತ್ನವೂ ಅಗತ್ಯ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬೆಂಗಳೂರು ನಗರವು ನಾವೀನ್ಯಕ್ಕೆ ಹೆಸರಾಗಿದೆ. ಕರ್ನಾಟಕ ಸರ್ಕಾರವು ನವೋದ್ಯಮಗಳಿಗೆ ಎಲ್ಲ ರೀತಿಯ ಉತ್ತೇಜನ ನೀಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ವರ್ಷ ಜಿ–20 ಸಭೆಗಳು ಭಾರತದಲ್ಲಿ ನಡೆಯಲಿವೆ. ರಾಜ್ಯದಲ್ಲಿಯೂ ಕೆಲವು ಸಭೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ಕರ್ನಾಟಕವು ತನ್ನ ಉತ್ಪನ್ನಗಳನ್ನು ಪ್ರದರ್ಶಿಸಬೇಕು ಎಂದು ಅವರು ಹೇಳಿದರು. ಕರಕುಶಲ ಮತ್ತು ಸಾಂಪ್ರದಾಯಿಕ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳ ಜೊತೆಗೂಡಿ ಉತ್ಪನ್ನಗಳನ್ನು ಗುರುತಿಸಿ, ಬ್ರ್ಯಾಂಡಿಂಗ್ ಮಾಡುವಂತೆ ಎಫ್‌ಕೆಸಿಸಿಐಗೆ ಸಲಹೆ ನೀಡಿದರು.
‘ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೊಂದಿರುವ ಗುರಿಯ ಈಡೇರಿಕೆಗೆ ಪೂರಕವಾಗಿ ವ್ಯಾಪಾರ ಮತ್ತು ಕೈಗಾರಿಕೆಗಳ ಬೆಳವಣಿಗೆಗೆ ಬೆಂಬಲ ನೀಡುವಲ್ಲಿ ಎಫ್‌ಕೆಸಿಸಿಐ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಐ.ಎಸ್. ಪ್ರಸಾದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.