ADVERTISEMENT

ಮೊದಲ ಹಣಕಾಸು ಸಚಿವೆ: ನಿರ್ಮಲಾ ಹೆಗ್ಗಳಿಕೆ

​ಪ್ರಜಾವಾಣಿ ವಾರ್ತೆ
Published 31 ಮೇ 2019, 19:16 IST
Last Updated 31 ಮೇ 2019, 19:16 IST
ಅಧಿಕಾರವಹಿಸಿಕೊಂಡ ಸಂದರ್ಭದಲ್ಲಿನ ಭಾವುಕ ಕ್ಷಣ – ಪಿಟಿಐ ಚಿತ್ರ
ಅಧಿಕಾರವಹಿಸಿಕೊಂಡ ಸಂದರ್ಭದಲ್ಲಿನ ಭಾವುಕ ಕ್ಷಣ – ಪಿಟಿಐ ಚಿತ್ರ   

ನವದೆಹಲಿ: ರಾಜ್ಯಸಭೆಯಲ್ಲಿ ಕರ್ನಾಟಕ ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್‌ (59) ಅವರು, ದೇಶದ ಮೊದಲ ಹಣಕಾಸು ಸಚಿವೆ ಎನ್ನುವ ಅಭಿವಾದನಕ್ಕೆ ಪಾತ್ರರಾಗಿದ್ದಾರೆ.

ಹಣಕಾಸು ಖಾತೆಯ ಸಂಪುಟ ದರ್ಜೆ ಸಚಿವೆಯಾಗಿ ಶುಕ್ರವಾರ ಅಧಿಕಾರವಹಿಸಿಕೊಂಡರು. ಇದಕ್ಕೂ ಮೊದಲು ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಈ ಖಾತೆಯ ಹೆಚ್ಚುವರಿ ಹೊಣೆಯನ್ನಷ್ಟೇ ಹೊತ್ತಿದ್ದರು.

ಈ ಹಿಂದಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ, ಈಗ ಅರುಣ್‌ ಜೇಟ್ಲಿ ಅವರ ಉತ್ತರಾಧಿಕಾರಿಯಾಗಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಸಚಿವರಾಗಲು ಜೇಟ್ಲಿ ನಿರಾಕರಿಸಿದ್ದಾರೆ.

ADVERTISEMENT

ನಿರ್ಮಲಾ ಅವರ ಮುಂದೆ ಬಹುದೊಡ್ಡ ಸವಾಲಿದೆ. ಕುಂಟುತ್ತ ಸಾಗಿರುವ ದೇಶಿ ಆರ್ಥಿಕತೆಗೆ ಚೇತರಿಕೆ ನೀಡುವ ಗುರುತರ ಹೊಣೆಗಾರಿಕೆಯನ್ನು ಅವರು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಜುಲೈನಲ್ಲಿ ಮಂಡಿಸಲಾಗುವ ಹೊಸ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್‌ ಸಿದ್ಧಪಡಿಸಲು ಅವರೀಗ ಗಮನ ಹರಿಸಬೇಕಾಗಿದೆ.

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾಗಿರುವ ಇವರು, ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಲಂಡನ್‌ನಲ್ಲಿ ಸಲಹಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬಿಜೆಪಿಯ ರಾಷ್ಟ್ರೀಯ ವಕ್ತಾರೆಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.