
ಆರ್‌ಬಿಐ ಕೇಂದ್ರೀಯ ಮಂಡಳಿಯ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗವರ್ನರ್ ಸಂಜಯ್ ಮಲ್ಹೋತ್ರಾ ಭಾಗವಹಿಸಿದ್ದರು
ಪಿಟಿಐ ಚಿತ್ರ
ನವದೆಹಲಿ: ವಿಮೆ ಸೇರಿದಂತೆ ವಿವಿಧ ಹಣಕಾಸಿನ ಉತ್ಪನ್ನಗಳನ್ನು ಅಗತ್ಯ ಇಲ್ಲದವರಿಗೂ ಮಾರಾಟ ಮಾಡುವ ಬ್ಯಾಂಕ್‌ಗಳ ವಿರುದ್ಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಚಾಟಿ ಬೀಸಿದರು. ಬ್ಯಾಂಕ್‌ಗಳು ತಮ್ಮ ಮೂಲ ಕೆಲಸದ ಮೇಲೆ ಗಮನ ನೀಡಬೇಕು ಎಂದು ಹೇಳಿದರು.
‘ನನಗೆ ಯಾವಾಗಲೂ ಸಣ್ಣದಾಗಿ ಕಿರಿಕಿರಿ ಉಂಟುಮಾಡುವ ಸಂಗತಿಯೊಂದಿದೆ... ನೀವು ಅಗತ್ಯ ಇಲ್ಲದಿದ್ದಾಗಲೂ ವಿಮಾ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಸಮಯ ಕಳೆಯುತ್ತೀರಿ. ಇದರಿಂದಾಗಿ ಎರಡು ಬಗೆಯ ಉದ್ದೇಶಗಳನ್ನೂ ಈಡೇರಿಸಲು ಆಗುವುದಿಲ್ಲ (ಆರ್‌ಬಿಐನ ಉದ್ದೇಶ ಹಾಗೂ ಐಆರ್‌ಡಿಎಐನ ಉದ್ದೇಶ)’ ಎಂದು ಅವರು ಹೇಳಿದರು.
ಬಜೆಟ್ ಮಂಡನೆಯ ನಂತರದಲ್ಲಿ ಆರ್‌ಬಿಐ ಕೇಂದ್ರೀಯ ಮಂಡಳಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ನಂತರ ನಿರ್ಮಲಾ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
‘ಆರ್‌ಬಿಐ ಈ ವಿಚಾರವಾಗಿ ಮಾರ್ಗಸೂಚಿಯೊಂದನ್ನು ತರಲಿರುವುದು ನನಗೆ ಸಂತಸ ತಂದಿದೆ. ಹಣಕಾಸಿನ ಉತ್ಪನ್ನಗಳನ್ನು ಅನಗತ್ಯವಾಗಿ ಮಾರಾಟ ಮಾಡಿ, ಅದನ್ನು ದಕ್ಕಿಸಿಕೊಳ್ಳಲು ಆಗುವುದಿಲ್ಲ ಎಂಬ ಸಂದೇಶವು ಬ್ಯಾಂಕ್‌ಗಳಿಗೆ ರವಾನೆ ಆಗಬೇಕಿದೆ’ ಎಂದು ನಿರ್ಮಲಾ ಅವರು ಹೇಳಿದರು.
ಅಗತ್ಯವಿರುವ ವಿಮಾ ಸೌಲಭ್ಯವನ್ನು ಗ್ರಾಹಕ ಹೊಂದಿದ್ದರೂ ಬ್ಯಾಂಕ್‌ಗಳು ತಮ್ಮಲ್ಲಿಗೆ ಬರುವ ಗ್ರಾಹಕರು ವಿಮಾ ಉತ್ಪನ್ನ ಖರೀದಿಸಬೇಕು ಎಂದು ಹೇಳುತ್ತಿವೆ ಎಂಬುದನ್ನು ಪ್ರಸ್ತಾಪಿಸಿದ ನಿರ್ಮಲಾ, ‘ವಿಮೆಯ ವಿಚಾರವು ಐಆರ್‌ಡಿಎಐ ವ್ಯಾಪ್ತಿಗೆ ಬರುತ್ತದೆ ಎಂಬ ಕಾರಣಕ್ಕೆ ಈ ಬಗ್ಗೆ ಆರ್‌ಬಿಐ ನಿಗಾ ವಹಿಸಲಿಲ್ಲ’ ಎಂದರು.
‘ಇತ್ತ ಐಆರ್‌ಡಿಎಐ ಕೂಡ ಇದರ ಬಗ್ಗೆ ಗಮನ ನೀಡಲಿಲ್ಲ, ಬ್ಯಾಂಕ್‌ಗಳ ಮೇಲೆ ತನಗೆ ನಿಯಂತ್ರಣವಿಲ್ಲ ಎಂದು ಅದು ಭಾವಿಸಿತ್ತು. ಆದರೆ ನಿಯಮಗಳಲ್ಲಿನ ಲೋಪದ ಪರಿಣಾಮವಾಗಿ ಗ್ರಾಹಕರು ಸಮಸ್ಯೆ ಅನುಭವಿಸಿದರು. ಆಸ್ತಿಯನ್ನು ಅಡಮಾನವಾಗಿ ಇರಿಸಿ ಸಾಲ ಪಡೆಯುವ ವ್ಯಕ್ತಿಗಳು ವಿಮೆ ಖರೀದಿಸುವಂತೆ ಬ್ಯಾಂಕ್‌ಗಳು ತಮ್ಮನ್ನು ಏಕೆ ಒತ್ತಾಯಿಸುತ್ತವೆ ಎಂಬ ಪ್ರಶ್ನೆ ಕೇಳುತ್ತಲೇ ಇದ್ದರು’ ಎಂದು ನಿರ್ಮಲಾ ವಿವರಿಸಿದರು.
ಬ್ಯಾಂಕ್‌ಗಳ ಮೂಲ ಕೆಲಸ ಠೇವಣಿ ಸ್ವೀಕರಿಸುವುದು, ಸಾಲ ವಿತರಣೆ ಮಾಡುವುದು. ಅದರ ಬಗ್ಗೆ ಅವು ಗಮನ ನೀಡಬೇಕು. ಬ್ಯಾಂಕ್‌ಗಳಿಗೆ ಸಂಬಂಧವಿಲ್ಲದ ಉತ್ಪನ್ನ ಮಾರಾಟ ಮಾಡುವ ಬದಲು ಅವು ಕಡಿಮೆ ವೆಚ್ಚದ ಠೇವಣಿ (ಚಾಲ್ತಿ ಖಾತೆ ಉಳಿತಾಯ ಖಾತೆ) ಹೆಚ್ಚಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಆರ್‌ಬಿಐನಿಂದ ಕರಡು ಮಾರ್ಗಸೂಚಿ
ಬ್ಯಾಂಕ್‌ಗಳು ಅನ್ಯ ಹಣಕಾಸಿನ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಫೆಬ್ರುವರಿ 11ರಂದು ಕರಡು ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಅನಗತ್ಯವಾದ ಹಣಕಾಸಿನ ಉತ್ಪನ್ನ ಖರೀದಿಸಲು ಅಥವಾ ಸೇವೆಯನ್ನು ಪಡೆಯಲು ಗ್ರಾಹಕ ಪಾವತಿಸಿದ ಪೂರ್ಣ ಮೊತ್ತವನ್ನು ಬ್ಯಾಂಕ್‌ಗಳು ಮರುಪಾವತಿ ಮಾಡಬೇಕಾಗುತ್ತದೆ ಎಂದು ಕರಡು ಮಾರ್ಗಸೂಚಿಯು ಹೇಳಿದೆ. ಅನಗತ್ಯವಾದ ಹಣಕಾಸಿನ ಉತ್ಪನ್ನ ಮಾರಾಟ ಮಾಡಿದಾಗ ಅದರಿಂದ ಗ್ರಾಹಕರಿಗೆ ಆಗುವ ನಷ್ಟಕ್ಕೆ ಪರಿಹಾರ ಕೊಡಬೇಕಾಗುತ್ತದೆ ಎಂದು ಕೂಡ ಅದರಲ್ಲಿ ಹೇಳಲಾಗಿದೆ. ಈ ಕರಡು ಮಾರ್ಗಸೂಚಿಗಳಿಗೆ ಆಕ್ಷೇಪ ಸಲ್ಲಿಸಲು ಸಾರ್ವಜನಿಕರಿಗೆ ಮಾರ್ಚ್ 4ರವರೆಗೆ ಅವಕಾಶ ನೀಡಲಾಗಿದೆ. ಹಣಕಾಸಿನ ಉತ್ಪನ್ನಗಳನ್ನು ಅನಗತ್ಯವಾಗಿ ಮಾರಾಟ ಮಾಡುವುದನ್ನು ತಡೆಯುವ ಉದ್ದೇಶದ ಕಠಿಣ ನಿಯಮಗಳು ಜುಲೈ 1ರಿಂದ ಜಾರಿಗೆ ಬರಲಿವೆ ಎಂದು ಆರ್‌ಬಿಐ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.