ADVERTISEMENT

ಎಲ್‌ಪಿಜಿ ದರ ಕಡಿತ: ಪ್ರತಿ ಸಿಲಿಂಡರ್‌ಗೆ ₹60 ಇಳಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 8:13 IST
Last Updated 1 ಏಪ್ರಿಲ್ 2020, 8:13 IST
ಎಲ್‌ಪಿಜಿ ಸಿಲಿಂಡರ್‌
ಎಲ್‌ಪಿಜಿ ಸಿಲಿಂಡರ್‌   

ನವದೆಹಲಿ: ಹೊಸ ಹಣಕಾಸು ವರ್ಷದ ಮೊದಲ ದಿನವೇ ಅಡುಗೆ ಅನಿಲ ಎಲ್‌ಪಿಜಿ ದರ ಕಡಿಮೆ ಮಾಡಲಾಗಿದೆ. ತೈಲ ಮಾರಾಟ ಕಂಪನಿಗಳು ಬುಧವಾರ 14.2 ಕೆ.ಜಿಯ ಪ್ರತಿ ಸಿಲಿಂಡರ್‌ ಬೆಲೆ ₹60 ಇಳಿಕೆ ಮಾಡಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆಯಾಗಿರುವ ಬೆನ್ನಲ್ಲೇ ಎಲ್‌ಪಿಜಿ ಸಿಲಿಂಡರ್‌ ದರ ಕಡಿತಗೊಳಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿ) ಪ್ರಕಾರ, ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ದರ ₹61.50 ಕಡಿತಗೊಳಿಸಲಾಗಿದ್ದು, ಪ್ರತಿ ಸಿಲಿಂಡರ್‌ಗೆ ₹714.50 ಆಗಲಿದೆ.

ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್‌ ಮೇಲೆ ₹65 ಕಡಿತಗೊಳಿಸಲಾಗಿದ್ದು, ಮಾರಾಟ ದರ ₹774.50 ತಲುಪಿದೆ. ಚೆನ್ನೈನಲ್ಲಿ ₹64.50 ಕಡಿತವಾಗಿ ₹761.50 ಆಗಿದೆ ಹಾಗೂ ಮುಂಬೈನಲ್ಲಿ ಪ್ರತಿ ಎಲ್‌ಪಿಜಿ ಸಿಲಿಂಡರ್‌ ದರ ₹62 ಕಡಿಮೆಯಾಗಿದೆ. ರಾಜ್ಯ ಸರ್ಕಾರಗಳ ವ್ಯಾಟ್‌ ಆಧಾರದ ಮೇಲೆ ನಗರಗಳಲ್ಲಿ ಸಿಲಿಂಡರ್‌ ಬೆಲೆ ವ್ಯತ್ಯಾಸವಾಗುತ್ತದೆ.

ADVERTISEMENT

ಕಳೆದ ವರ್ಷ ಆಗಸ್ಟ್‌ನಿಂದ ಆರು ಬಾರಿ ಅಡುಗೆ ಅನಿಲ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ ಮಾಡಲಾಗಿತ್ತು. 2020ರ ಫೆಬ್ರುವರಿ ನಂತರದಲ್ಲಿ ಈಗ ಎರಡನೇ ಬಾರಿ ದರ ಕಡಿತ ಘೋಷಣೆಯಾಗಿದೆ. ಮಾರ್ಚ್‌ನಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ದರ ದೇಶದಾದ್ಯಂತ ಮೆಟ್ರೊ ನಗರಗಳಲ್ಲಿ ₹52.50ರಷ್ಟು ಕಡಿತಗೊಳಿಸಲಾಗಿತ್ತು.

ವರ್ಷಕ್ಕೆ 14.2 ಕೆಜಿಯ 12 ಸಿಲಿಂಡರ್‌ ವರೆಗೂ ಸಬ್ಸಿಡಿ ಅನ್ವಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.