ADVERTISEMENT

‘ಅದಾನಿ’ಯಿಂದ ಹೊರಬಂದ ನಾರ್ವೆ ಸಾವರಿನ್ ವೆಲ್ತ್‌ ಫಂಡ್

2014ರಿಂದಲೇ ಹೂಡಿಕೆ ಹಿಂಪಡೆಯುತ್ತಿರುವ ನಾರ್ವೆಯ ಸಂಸ್ಥೆ

ಏಜೆನ್ಸೀಸ್
Published 9 ಫೆಬ್ರುವರಿ 2023, 15:47 IST
Last Updated 9 ಫೆಬ್ರುವರಿ 2023, 15:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಓಸ್ಲೋ: ಅದಾನಿ ಸಮೂಹದ ಕಂಪನಿಗಳಲ್ಲಿ ಹೊಂದಿದ್ದ ಅಷ್ಟೂ ಷೇರುಗಳನ್ನು ಮಾರಾಟ ಮಾಡಿರುವುದಾಗಿ ‘ನಾರ್ವೆ ಸಾವರಿನ್‌ ವೆಲ್ತ್‌ ಫಂಡ್‌’ ಗುರುವಾರ ತಿಳಿಸಿದೆ.

2022ರ ಅಂತ್ಯದ ವೇಳೆಗೆ ಅದಾನಿ ಸಮೂಹದಲ್ಲಿ ₹ 1,640 ಕೋಟಿ ಮೌಲ್ಯದ ಷೇರುಗಳನ್ನು ಈ ಸಂಸ್ಥೆ ಹೊಂದಿತ್ತು.

ಅದಾನಿ ಗ್ರೀನ್‌ ಎನರ್ಜಿ ಕಂಪನಿಯಲ್ಲಿ ಶೇ 0.14ರಷ್ಟು, ಅದಾನಿ ಟೋಟಲ್‌ ಗ್ಯಾಸ್‌ನಲ್ಲಿ ಶೇ 0.17ರಷ್ಟು ಮತ್ತು ಅದಾನಿ ಪೋರ್ಟ್ಸ್‌ ಆ್ಯಂಡ್‌ ಸ್ಪೆಷಲ್‌ ಎಕನಾಮಿಕ್‌ ಜೋನ್‌ನಲ್ಲಿ ಶೇ 0.3ರಷ್ಟು ಷೇರುಪಾಲು ಹೊಂದಿತ್ತು.

ADVERTISEMENT

‘2022ರ ಅಂತ್ಯದಿಂದ ಈಚೆಗೆ ಐದು ವಾರಗಳಲ್ಲಿ ಅದಾನಿ ಕಂಪನಿಗಳಲ್ಲಿ ನಮ್ಮ ಹೂಡಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ’ ಎಂದು ಕಂಪನಿಯಲ್ಲಿನ ಪರಿಸರ, ಸಮಾಜ ಮತ್ತು ಆಡಳಿತ (ಇಎಸ್‌ಜಿ) ವ್ಯವಸ್ಥೆಯ ವಿಪತ್ತು ನಿಗಾ ವಿಭಾಗದ ಮುಖ್ಯಸ್ಥ ಕ್ರಿಸ್ಟೊಫರ್‌ ವ್ರೈಟ್‌ ತಿಳಿಸಿದ್ದಾರೆ.

ಅರಣ್ಯನಾಶ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇರುವ ಕಾರಣಗಳಿಂದಾಗಿ ನಾರ್ವೆ ಸಾವರಿನ್‌ ವೆಲ್ತ್‌ ಫಂಡ್‌, 2014ರಿಂದ 2023ರವರೆಗಿನ ಅವಧಿಯಲ್ಲಿ ಅದಾನಿ ಸಮೂಹದ ಆರು ಕಂಪನಿಗಳಿಂದ ಹೂಡಿಕೆ ಹಿಂದಕ್ಕೆ ಪಡೆದಿದೆ.

ಕಂಪನಿಗಳು ಇಸಿಜಿ ಮಾನದಂಡಗಳನ್ನು ಸರಿಯಾಗಿ ನಿರ್ವಹಿಸದೇ ಇರುವ ಕಾರಣಕ್ಕಾಗಿ ಕಳೆದ ವರ್ಷ ನಾರ್ವೆ ಸಂಸ್ಥೆಯು ಜಾಗತಿಕವಾಗಿ 74 ಕಂಪನಿಗಳಿಂದ ಹೂಡಿಕೆ ಹಿಂದಕ್ಕೆ ಪಡೆದಿತ್ತು. ಅಲ್ಲದೆ ಸಮಿತಿಯೊಂದರ ಶಿಫಾರಸಿನ ಮೇರೆಗೆ 13 ಇತರ ಕಂಪನಿಗಳಿಂದಲೂ ಬಂಡವಾಳ ಹಿಂದಕ್ಕೆ ಪಡೆದಿದೆ.

9 ಸಾವಿರ ಕಂಪನಿಗಳಲ್ಲಿ ನಾರ್ವೆ ಸಾವರಿನ್‌ ವೆಲ್ತ್‌ ಫಂಡ್‌ ಹೂಡಿಕೆ ಮಾಡಿದೆ. ಬಾಂಡ್‌ಗಳು ಮತ್ತು ರಿಯಲ್‌ ಎಸ್ಟೇಟ್‌ನಲ್ಲಿಯೂ ಬಂಡವಾಳ ತೊಡಗಿಸುತ್ತದೆ. ಮಾನವ ಹಕ್ಕು ಉಲ್ಲಂಘಿಸುವ, ಅಣ್ವಸ್ತ್ರಗಳನ್ನು ತಯಾರಿಸುವ ಅಥವಾ ಕಲ್ಲಿದ್ದಲು ಮತ್ತು ತಂಬಾಕು ಬಳಕೆಯ ಕಂಪನಿಗಳಲ್ಲಿ ಇದು ಹೂಡಿಕೆ ಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.