ADVERTISEMENT

ಜನ್‌ಧನ್‌ ಖಾತೆಯಲ್ಲಿನ ಹಣ ಸುರಕ್ಷಿತ, ಗಾಳಿ ಸುದ್ದಿ ನಂಬಬೇಡಿ: ಎಸ್‌ಬಿಐ ಭರವಸೆ

ಪಿಟಿಐ
Published 10 ಏಪ್ರಿಲ್ 2020, 2:52 IST
Last Updated 10 ಏಪ್ರಿಲ್ 2020, 2:52 IST
   

ನವದೆಹಲಿ: ಮಹಿಳೆಯರ ಜನ್‌ಧನ್‌ ಖಾತೆಗೆ ಕೇಂದ್ರ ಸರ್ಕಾರವು ಹಣ ಜಮೆ ಮಾಡುವುದಕ್ಕೆ ಸಂಬಂಧಿಸಿದ ಗಾಳಿ ಸುದ್ದಿಗಳಿಗೆ ಬಲಿಯಾಗಬಾರದು ಎಂದು ಹಣಕಾಸು ಸಚಿವಾಲಯವು ಮನವಿ ಮಾಡಿಕೊಂಡಿದೆ.

ಫಲಾನುಭವಿಗಳು ಖಾತೆಯಿಂದ ಹಣ ಹಿಂದೆ ಪಡೆಯದಿದ್ದರೆ ಸರ್ಕಾರ ಹಣ ವಾಪಸ್‌ ಪಡೆಯಲಿದೆ ಎನ್ನುವ ವದಂತಿಗಳನ್ನು ನಂಬಬಾರದು ಎಂದು ಗರಿಷ್ಠ ಸಂಖ್ಯೆಯಲ್ಲಿ ’ಪ್ರಧಾನ ಮಂತ್ರಿ ಜನ್‌ಧನ್‌ ಯೋಜನೆ’ (ಪಿಎಂಜೆಡಿವೈ) ಖಾತೆಗಳನ್ನು ಹೊಂದಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೇಳಿಕೊಂಡಿದೆ.

‘ನಿಮ್ಮ ಖಾತೆಯಲ್ಲಿನ ಹಣಕ್ಕೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಮತ್ತು ಅದು ಸರ್ಕಾರದ ಬೊಕ್ಕಸಕ್ಕೆ ವಾಪಸ್‌ ಆಗುವುದೂ ಇಲ್ಲ‘ ಎಂದು ಎಸ್‌ಬಿಐ ಭರವಸೆ ನೀಡಿದೆ.

ADVERTISEMENT

ಗಾಳಿ ಸುದ್ದಿಯಿಂದಾಗಿ ಫಲಾನುಭವಿಗಳು ಹಣ ಹಿಂದೆ ಪಡೆಯಲು ಬ್ಯಾಂಕ್‌ ಶಾಖೆಗಳಿಗೆ ಮುಗಿ ಬಿದ್ದಿದ್ದರು. ‘ಕೊರೊನಾ–2’ ವೈರಾಣು ಹರಡುವುದನ್ನು ತಡೆಯಲು ಜಾರಿಯಲ್ಲಿ ಇರುವ ಪರಸ್ಪರ ಅಂತರ ಕಾಯ್ದುಕೊಳ್ಳುವ ಮಾರ್ಗದರ್ಶಿ ಸೂತ್ರಗಳನ್ನು ಈ ಸಂದರ್ಭದಲ್ಲಿ ಎಗ್ಗಿಲ್ಲದೆ ಉಲ್ಲಂಘಿಸಿದ ಘಟನೆಗಳು ನಡೆದಿವೆ.

ಖಾತೆಗೆ ಜಮೆ ಮಾಡಿರುವ ₹ 500ಗಳನ್ನು ಫಲಾನುಭವಿಗಳ ಯಾವಾಗಲಾದರೂ ಹಿಂದೆ ಪಡೆಯಬಹುದಾಗಿದೆ. ಮೇ ಮತ್ತು ಜೂನ್‌ ತಿಂಗಳಲ್ಲಿಯೂ ₹ 500ರಂತೆ ಒಟ್ಟು ₹ 1,000 ಗಳನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು ಎಂದು ಹಣಕಾಸು ಸೇವೆಗಳ ಇಲಾಖೆ (ಡಿಎಫ್‌ಎಸ್‌) ತಿಳಿಸಿದೆ.

ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆ ಸಮೀಪದ ಎಟಿಎಂ, ಗ್ರಾಹಕರ ಸೇವಾ ಕೇಂದ್ರಗಳಿಂದಲೂ (ಸಿಎಸ್‌ಪಿ) ಖಾತೆಯಲ್ಲಿನ ಹಣ ಪಡೆಯಬಹುದಾಗಿದೆ.

38.08 ಕೋಟಿ: ‘ಪಿಎಂಜೆಡಿವೈ’ ಖಾತೆಗಳ ಒಟ್ಟು ಸಂಖ್ಯೆ

20.60 ಕೋಟಿ: ಮಹಿಳೆಯರ ಜನ್‌ಧನ್‌ ಖಾತೆಗಳು

₹ 1.19 ಲಕ್ಷ ಕೋಟಿ: ಜನ್‌ಧನ್‌ ಖಾತೆಯಲ್ಲಿನ ಠೇವಣಿ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.