ಮುಂಬೈ: ‘ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (ಎನ್‌ಪಿಎಸ್) ಸಂಪತ್ತಿನ ನಿರ್ವಹಣಾ ಮೌಲ್ಯವು (ಎಯುಎಂ) ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ₹15 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ’ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಅಧ್ಯಕ್ಷ ದೀಪಕ್ ಮೊಹಂತಿ ಹೇಳಿದ್ದಾರೆ.
ಶನಿವಾರ ನಡೆದ ಎನ್‌ಪಿಎಸ್ ಮಧ್ಯಸ್ಥಿಕೆದಾರರ ಸಂಘದ ಉದ್ಘಾಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾರ್ಪೊರೇಟ್ ವಲಯದ ಉದ್ಯೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಪಿಎಸ್ ಅಡಿ ಸೇರ್ಪಡೆಗೊಳಿಸುವುದು ಇಂದಿಗೂ ಸವಾಲಾಗಿದೆ’ ಎಂದರು.
ದೇಶದ ಪಿಂಚಣಿ ವಲಯದಲ್ಲಿ 8 ಕೋಟಿ ಚಂದಾದಾರರಿದ್ದಾರೆ. ಈ ಪೈಕಿ 6.4 ಕೋಟಿ ಅಟಲ್ ಪಿಂಚಣಿ ಯೋಜನೆಯ ಸದಸ್ಯರಿದ್ದಾರೆ. ಎನ್‌ಪಿಎಸ್ ಚಂದಾದಾರರ ಸಂಖ್ಯೆ 1.6 ಕೋಟಿ ಇದೆ. ಸದ್ಯ ಈ ಎಲ್ಲಾ ಚಂದಾದಾರರ ಒಟ್ಟು ಸಂಪತ್ತಿನ ನಿರ್ವಹಣಾ ಮೌಲ್ಯವು ₹14 ಲಕ್ಷ ಕೋಟಿ ಇದೆ ಎಂದು ವಿವರಿಸಿದರು.
ಎನ್‌ಪಿಎಸ್‌ನ ಒಟ್ಟು ಚಂದಾದಾರರ ಪೈಕಿ 62 ಲಕ್ಷ ಸದಸ್ಯರು ಖಾಸಗಿ ವಲಯಕ್ಕೆ ಹಾಗೂ 18 ಲಕ್ಷ ಚಂದಾದಾರರು ಕಾರ್ಪೋರೇಟ್ ವಲಯಕ್ಕೆ ಸೇರಿದ್ದಾರೆ ಎಂದರು.
ದೇಶದಲ್ಲಿ 18 ಸಾವಿರಕ್ಕೂ ಹೆಚ್ಚು ಕಾರ್ಪೊರೇಟ್ ಕಂಪನಿಗಳಿವೆ. ಈ ಪೈಕಿ ಅತಿದೊಡ್ಡ ಕಂಪನಿಗಳು ಸೇರಿವೆ. ಈ ವಲಯದಿಂದ ಎನ್‌ಪಿಎಸ್‌ಗೆ ಸೇರ್ಪಡೆಯಾಗುವ ಉದ್ಯೋಗಿಗಳ ಸಂಖ್ಯೆ ತೀರಾ ಕಡಿಮೆ. ಅರಿವಿನ ಕೊರತೆಯೇ ಇದಕ್ಕೆ ಕಾರಣ ಎಂದರು.
ಎನ್‌ಪಿಎಸ್ ಹಣವನ್ನು ಈಕ್ವಿಟಿ, ಸರ್ಕಾರಿ ಸಾಲಪತ್ರಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಆರಂಭದಲ್ಲಿ ಈ ಹೂಡಿಕೆಯ ವಾರ್ಷಿಕ ಗಳಿಕೆ ಶೇ 9.6ರಷ್ಟಿತ್ತು. ಸದ್ಯ ಗಳಿಕೆಯ ಪ್ರಮಾಣ ಶೇ 14.4ರಷ್ಟಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.