ADVERTISEMENT

ಎನ್‌ಪಿಎಸ್ ಹಣ ರಾಜ್ಯಗಳಿಗೆ ಮರಳಿಸಲಾಗದು: ಕೇಂದ್ರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 22:31 IST
Last Updated 20 ಫೆಬ್ರುವರಿ 2023, 22:31 IST
   

ಜೈಪುರ: ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್) ಅಡಿಯಲ್ಲಿ ಹೂಡಿಕೆ ಮಾಡಲಾದ ಹಣವನ್ನು ರಾಜ್ಯ ಸರ್ಕಾರಗಳಿಗೆ ಮರಳಿಸಲು ಈಗಿರುವ ನಿಯಮಗಳ ಅಡಿಯಲ್ಲಿ ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರವು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಕಾರ್ಯದರ್ಶಿ ವಿವೇಕ್ ಜೋಷಿ ಅವರು ಈ ಮಾತನ್ನು ಹೇಳಿದ್ದಾರೆ.

ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಈಚೆಗೆ ಕಂಡುಬಂದ ಕುಸಿತವನ್ನು ಉಲ್ಲೇಖಿಸಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು, ರಾಜ್ಯ ಸರ್ಕಾರದ ನೌಕರರನ್ನು ಷೇರು ಮಾರುಕಟ್ಟೆಯ ಏರಿಳಿತಗಳಿಗೆ ಒಡ್ಡಲು ಆಗದು ಎಂದು ಹೇಳಿದ್ದರು. ಎನ್‌ಪಿಎಸ್ ಅಡಿ ಹಣವನ್ನು ಷೇರುಗಳಲ್ಲಿಯೂ ತೊಡಗಿಸಲಾಗುತ್ತದೆ.

ADVERTISEMENT

ಎನ್‌ಪಿಎಸ್ ಯೋಜನೆಯಲ್ಲಿ ತೊಡಗಿಸಲಾಗಿರುವ ರಾಜ್ಯ ಸರ್ಕಾರಿ ನೌಕರರ ಹಣವನ್ನು ವಾಪಸ್ ಕೊಡಬೇಕು ಎಂದು ಅವರು ಕೇಂದ್ರವನ್ನು ಆಗ್ರಹಿಸಿದ್ದರು. ಅಲ್ಲದೆ, ಹಣವನ್ನು ಹಳೆ ಪಿಂಚಣಿ ಯೋಜನೆಗೆ (ಒಪಿಎಸ್) ವರ್ಗಾವಣೆ ಮಾಡದೆ ಇದ್ದರೆ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಅವರು ಹೇಳಿದ್ದರು.

‘ಹಣದ ಮೇಲೆ ನೌಕರರಿಗೆ ಹಕ್ಕಿದೆ. ಹೂಡಿಕೆಯಾದ ಹಣವು ಬಡ್ಡಿಯನ್ನು ಪಡೆಯುತ್ತಿರುತ್ತದೆ. ನಿವೃತ್ತಿಯ ನಂತರದಲ್ಲಿ ಹಣವು ನೌಕರರಿಗೆ ಸಿಗುತ್ತದೆ. ಆದರೆ ಹಣವು ಸರ್ಕಾರದ ಕೈಗೆ ವಾಪಸ್ ಸಿಗುವುದಿಲ್ಲ’ ಎಂದು ನಿರ್ಮಲಾ ಅವರು ವರದಿಗಾರರಿಗೆ ತಿಳಿಸಿದ್ದಾರೆ. ನಿರ್ಮಲಾ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದರು. ಎನ್‌ಪಿಎಸ್ ಅಡಿಯಲ್ಲಿ ಹೂಡಿಕೆ ಆಗಿರುವ ಹಣವು ನೌಕರನಿಗೆ ಸಂಬಂಧಿಸಿದ್ದು. ಇಲ್ಲಿ ಎನ್‌ಪಿಎಸ್ ಟ್ರಸ್ಟ್ ಹಾಗೂ ನೌಕರನ ನಡುವೆ ಒಂದು ಒಪ್ಪಂದ ಏರ್ಪಟ್ಟಿರುತ್ತದೆ. ಎನ್‌ಪಿಎಸ್ ಅಡಿಯಲ್ಲಿ ಹೂಡಿಕೆ ಆಗಿರುವ ಹಣವು ವಾಪಸ್ ಸಿಗುತ್ತದೆ ಎಂದು ರಾಜ್ಯ ಸರ್ಕಾರಗಳು ಭಾವಿಸಿದ್ದರೆ, ಅದು ಈಗಿನ ಕಾನೂನುಗಳ ಅಡಿಯಲ್ಲಿ ಸಾಧ್ಯವಿಲ್ಲ ಎಂದು ಜೋಷಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.