ನವದೆಹಲಿ: ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಮೂಲಕ ₹4,011 ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.
ಜುಲೈ 30ರಂದು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಆಗಸ್ಟ್ 1ರಂದು ಅಂತ್ಯಗೊಳ್ಳಲಿದೆ. ಆರಂಭಿಕ ಹೂಡಿಕೆದಾರರು (ಆ್ಯಂಕರ್ ಇನ್‌ವೆಸ್ಟರ್) ಜುಲೈ 29ರಂದು ಅರ್ಜಿ ಸಲ್ಲಿಸಬಹುದು. ಈ ಐಪಿಒ ಆಫರ್ ಫಾರ್ ಸೇಲ್ (ಒಎಫ್‌ಎಸ್) ಆಗಿರಲಿದೆ. 5.01 ಕೋಟಿ ಷೇರುಗಳನ್ನು ಮಾರಾಟ ಮಾಡಲಾಗುವುದು. ಪ್ರತಿ ಷೇರಿನ ಬೆಲೆ ₹760ರಿಂದ ₹800 ಇರಲಿದೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ.
ಈ ಷೇರುಗಳ ಹಂಚಿಕೆ ಪೈಕಿ ಶೇ 50ರಷ್ಟನ್ನು ಅರ್ಹ ಸಾಂಸ್ಥಿಕ ಖರೀದಿಗಾರರಿಗೆ ಮೀಸಲಿರಿಸಲಾಗಿದೆ. ಶೇ 35ರಷ್ಟನ್ನು ಸಣ್ಣ ಹೂಡಿಕೆದಾರರು ಮತ್ತು ಉಳಿದ ಶೇ 15ರಷ್ಟನ್ನು ಸಾಂಸ್ಥಿಕೇತರ ಖರೀದಿದಾರರು ಖರೀದಿಸಬಹುದಾಗಿದೆ.
ಐಸಿಐಸಿಐ ಸೆಕ್ಯುರಿಟೀಸ್, ಎಕ್ಸಿಸ್ ಕ್ಯಾಪಿಟಲ್, ಎಚ್‌ಎಚ್‌ಬಿಸಿ ಸೆಕ್ಯುರಿಟೀಸ್ ಆ್ಯಂಡ್ ಕ್ಯಾಪಿಟಲ್ ಮಾರ್ಕೆಟ್ಸ್ (ಇಂಡಿಯಾ), ಐಡಿಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಆ್ಯಂಡ್ ಸೆಕ್ಯುರಿಟೀಸ್, ಮೋತಿಲಾಲ್ ಓಸ್ವಾಲ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್ ಮತ್ತು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಈ ಐಪಿಒದ ನಿರ್ವಹಣೆ ಮಾಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.