ADVERTISEMENT

ಕಾರ್ವಿ ವಹಿವಾಟು ಲೈಸನ್ಸ್‌ ರದ್ದು

ಷೇರು ದಲ್ಲಾಳಿ ಸಂಸ್ಥೆ ವಿರುದ್ಧ ‘ಬಿಎಸ್‌ಇ’, ‘ಎನ್‌ಎಸ್‌ಇ’ ಕ್ರಮ

ಪಿಟಿಐ
Published 2 ಡಿಸೆಂಬರ್ 2019, 18:30 IST
Last Updated 2 ಡಿಸೆಂಬರ್ 2019, 18:30 IST
ಬಿಎಸ್‌ಇ
ಬಿಎಸ್‌ಇ   

ನವದೆಹಲಿ: ಷೇರು ದಲ್ಲಾಳಿ ಸಂಸ್ಥೆ ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ ಲಿಮಿಟೆಡ್‌ನ (ಕೆಎಸ್‌ಬಿಎಲ್‌) ವಹಿವಾಟು (ಟ್ರೇಡಿಂಗ್‌) ಲೈಸೆನ್ಸ್‌ ಅನ್ನು ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಗಳು ಸೋಮವಾರ ರದ್ದುಪಡಿಸಿವೆ.

ಷೇರುಪೇಟೆಗಳ ನಿಯಮಗಳನ್ನು ಪಾಲನೆ ಮಾಡದಿರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಷೇರು ದಲ್ಲಾಳಿ ವಹಿವಾಟಿಗೆ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳಬಾರದು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನ. 22 ರಂದು ಕಾರ್ವಿ ಮೇಲೆ ನಿಷೇಧ ವಿಧಿಸಿತ್ತು. ಗ್ರಾಹಕರು ನೀಡಿದ್ದ ಪವರ್‌ ಆಫ್‌ ಅಟಾರ್ನಿ (ಪಿಒಎ) ಬಳಸುವುದನ್ನೂ ನಿರ್ಬಂಧಿಸಿತ್ತು. ಗ್ರಾಹಕರ ಷೇರುಗಳನ್ನು ‘ಕೆಎಸ್‌ಬಿಎಲ್‌’ ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ‘ಸೆಬಿ’ ಈ ಕ್ರಮ ಕೈಗೊಂಡಿತ್ತು.

ಗ್ರಾಹಕರ ಷೇರು ದುರ್ಬಳಕೆ ಮಾಡಿಕೊಂಡ ಮತ್ತು ನಿಯಮ ಉಲ್ಲಂಘಿಸಿ ಷೇರುಗಳನ್ನು ಅಡಮಾನ ಇರಿಸಿ ಸಾಲ ‍ಪಡೆದುಕೊಂಡಿರುವ ಬಗ್ಗೆ ರಾಷ್ಟ್ರೀಯ ಷೇರುಪೇಟೆಯು (ಎನ್‌ಎಸ್‌ಇ) ‘ಸೆಬಿ’ಗೆ ವರದಿ ಸಲ್ಲಿಸಿತ್ತು.

ADVERTISEMENT

ಗ್ರಾಹಕರಿಗೆ ಹಣ: ‘ಸೆಬಿ’ ಸಕಾಲದಲ್ಲಿ ಕೈಗೊಂಡಿರುವ ಕ್ರಮದಿಂದಾಗಿ, ‘ಕೆಎಸ್‌ಬಿಎಲ್‌’ ಅಕ್ರಮವಾಗಿ ತನ್ನ ಸ್ವಂತ ಖಾತೆಗೆ ವರ್ಗಾಯಿಸಿಕೊಂಡಿದ್ದ ಮತ್ತು ಯಾವುದೇ ಅಧಿಕಾರ ಇಲ್ಲದೆ ಅಡಮಾನ ಇರಿಸಿದ್ದ ಷೇರುಗಳನ್ನು 83 ಸಾವಿರದಷ್ಟು ಹೂಡಿಕೆದಾರರು ಮರಳಿ ಪಡೆಯಲಿದ್ದಾರೆ.

ನ್ಯಾಷನಲ್‌ ಸೆಕ್ಯುರಿಟೀಸ್‌ ಡಿಪಾಸಿಟರಿ ಲಿಮಿಟೆಡ್‌ (ಎನ್‌ಎಸ್‌ಡಿಎಲ್‌) ಕೈಗೊಂಡ ಷೇರುಗಳ ವರ್ಗಾವಣೆಯಿಂದಾಗಿ ಕಾರ್ವಿಯ ಶೇ 90ರಷ್ಟು ಹೂಡಿಕೆದಾರರು ತಮ್ಮ ಷೇರುಗಳನ್ನು ಮರಳಿ ಪಡೆಯಲಿದ್ದಾರೆ. ಉಳಿದವರು ತಮ್ಮ ಬಾಕಿ ಪಾವತಿಸಿದ ನಂತರ ಪಡೆಯಲಿದ್ದಾರೆ.

‘ಸೆಬಿ’ ನಿರ್ದೇಶನದಡಿ ಮತ್ತು ‘ಎನ್‌ಎಸ್‌ಇ’ ಮೇಲ್ವಿಚಾರಣೆಯಲ್ಲಿ ಕಾರ್ವಿಯ ಡಿಮ್ಯಾಟ್‌ ಖಾತೆಯಿಂದ ಗ್ರಾಹಕರ ಡಿಮ್ಯಾಟ್‌ ಖಾತೆಗೆ ಹಣ ವರ್ಗಾವಣೆ ನಡೆಯಲಿದೆ’ ಎಂದು ಎನ್‌ಎಸ್‌ಡಿಎಲ್‌ ತಿಳಿಸಿದೆ.

‘ಕೆಎಸ್‌ಬಿಎಲ್‌’ ತನ್ನ 95 ಸಾವಿರ ಗ್ರಾಹಕರ ₹ 2,300 ಕೋಟಿ ಮೊತ್ತದ ಷೇರುಗಳನ್ನು ಅಡಮಾನ ಇರಿಸಿ ₹ 600 ಕೋಟಿಗಳಷ್ಟು ಸಾಲ ಪಡೆದಿತ್ತು.

‘ಸೆಬಿ’ ಸಕಾಲದಲ್ಲಿ ಕಾರ್ಯಪ್ರವೃತ್ತವಾಗಿದ್ದರಿಂದ ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಕೋ–ಆಪರೇಟಿವ್‌ ಬ್ಯಾಂಕ್‌ಗೆ (ಪಿಎಂಸಿ) ಬಂದೊದಗಿದಂತಹ ಪರಿಸ್ಥಿತಿ ತಪ್ಪಿದಂತಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.