ADVERTISEMENT

ಅತಿ ಶ್ರೀಮಂತರ ಸಂಖ್ಯೆ ಶೇ 7.5ರಷ್ಟು ಇಳಿಕೆ

ಬಿಲಿಯನೇರ್‌ಗಳ ಸಂಖ್ಯೆ ಏರಿಕೆ: ನೈಟ್‌ ಫ್ರ್ಯಾಂಕ್‌ ಇಂಡಿಯಾ ವರದಿ

ಪಿಟಿಐ
Published 17 ಮೇ 2023, 15:40 IST
Last Updated 17 ಮೇ 2023, 15:40 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ₹ 247 ಕೋಟಿಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಅತಿಶ್ರೀಮಂತ ವ್ಯಕ್ತಿಗಳ ಸಂಖ್ಯೆಯು 2022ರಲ್ಲಿ ದೇಶದಲ್ಲಿ ಶೇಕಡ 7.5ರಷ್ಟು ಇಳಿಕೆಯಾಗಿದೆ ಎಂದು ನೈಟ್ ಫ್ರ್ಯಾಂಕ್ ವರದಿ ಹೇಳಿದೆ

ಅತಿಶ್ರೀಮಂತರ ಸಂಖ್ಯೆಯು 2021ರಲ್ಲಿ 13,637 ಇತ್ತು. 2022ರಲ್ಲಿ 12,069ಕ್ಕೆ ಇಳಿಕೆ ಕಂಡಿದೆ. 2027ರ ವೇಳೆಗೆ ಇವರ ಸಂಖ್ಯೆಯು 19,119ಕ್ಕೆ ಏರಿಕೆ ಕಾಣುವ ಅಂದಾಜು ಮಾಡಲಾಗಿದೆ.

ಭಾರತದಲ್ಲಿ ಬಿಲಿಯನೇರ್‌ಗಳ (₹ 7,570 ಕೋಟಿಗಿಂತ ಹೆಚ್ಚು ಸಂಪತ್ತು ಹೊಂದಿರುವವರು) ಸಂಖ್ಯೆಯು 2021ರಲ್ಲಿ 145 ಇದ್ದಿದ್ದು 2022ರಲ್ಲಿ 161ಕ್ಕೆ ಏರಿಕೆ ಆಗಿದೆ. 2027ರ ವೇಳೆಗೆ 195ಕ್ಕೆ ಏರಿಕೆ ಆಗುವ ಅಂದಾಜು ಮಾಡಿರುವುದಾಗಿ ಸಂಸ್ಥೆಯು ಬುಧವಾರ ಬಿಡುಗಡೆ ಮಾಡಿರುವ ‘ದಿ ವೆಲ್ತ್‌ ರಿಪೋರ್ಟ್‌ 2023’ರಲ್ಲಿ ಹೇಳಿದೆ.

ADVERTISEMENT

2022ರಲ್ಲಿ ಜಾಗತಿಕ ಮಟ್ಟದಲ್ಲಿ ಅತಿಶ್ರೀಮಂತರ ಸಂಖ್ಯೆಯು ಶೇ 3.8ರಷ್ಟು ಇಳಿಕೆ ಕಂಡಿದೆ. ಮಂದಗತಿಯ ಆರ್ಥಿಕ ಬೆಳವಣಿಗೆ, ಬಡ್ಡಿದರ ಹೆಚ್ಚುತ್ತಿರುವುದು ಹಾಗೂ ಜಾಗತಿಕ ರಾಜಕೀಯ ಬಿಕ್ಕಟ್ಟಿನ ಕಾರಣಗಳಿಂದಾಗಿ ಅತಿಶ್ರೀಮಂತರ ಸಂಖ್ಯೆಯಲ್ಲಿ ಇಳಿಕೆ ಆಗಿದೆ. 2021ರಲ್ಲಿ ಶೇ 9.3ರಷ್ಟು ದಾಖಲೆಯ ಏರಿಕೆ ಕಂಡಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಸಿರಿವಂತರ ಸಂಖ್ಯೆಯು (₹8 ಕೋಟಿಗೂ ಹೆಚ್ಚು ಸಂಪತ್ತು ಹೊಂದಿರುವವರು)  7.63 ಲಕ್ಷದಿಂದ 7.97 ಲಕ್ಷಕ್ಕೆ ಏರಿಕೆ ಆಗಿದೆ.

ಭಾರತದಲ್ಲಿ ಜಾಗತಿಕ ಮಾರುಕಟ್ಟೆಗಾಗಿ ತಯಾರಿಕೆ, ಮೂಲಸೌಕರ್ಯ ಅಭಿವೃದ್ಧಿ, ತಂತ್ರಜ್ಞಾನಕ್ಕೆ ಸಂಬಂಧಿಸಿದ ನವೋದ್ಯಮಗಳು ಇತ್ಯಾದಿ ವಲಯಗಳಿಂದ ಹೊಸ ಅವಕಾಶಗಳು ಲಭ್ಯವಾಗುತ್ತಿವೆ. ಇದು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದ್ದು, ದೇಶದಲ್ಲಿ ಸಂಪತ್ತು ಸೃಷ್ಟಿಗೆ ನೆರವಾಗಲಿದೆ. ಆ ಮೂಲಕ ದೇಶದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾದ ಅಧ್ಯಕ್ಷ ಶಿಶಿರ್‌ ಬೈಜಲ್‌ ಹೇಳಿದ್ದಾರೆ.

ಕಾರಣಗಳು - ಅಮೆರಿಕದ ಡಾಲರ್ ಮೌಲ್ಯ ವೃದ್ಧಿ ಗರಿಷ್ಠ ಮಟ್ಟದಲ್ಲಿ ಬಡ್ಡಿದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.