ADVERTISEMENT

ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 22 ಡಾಲರ್‌ಗೂ ಕಡಿಮೆ: ಜಾಗತಿಕ ಬೇಡಿಕೆ ಕುಸಿತ 

ಏಜೆನ್ಸೀಸ್
Published 28 ಮಾರ್ಚ್ 2020, 12:40 IST
Last Updated 28 ಮಾರ್ಚ್ 2020, 12:40 IST
ಕಚ್ಚಾ ತೈಲ ಉತ್ಪಾದನೆ ಕುಸಿತ
ಕಚ್ಚಾ ತೈಲ ಉತ್ಪಾದನೆ ಕುಸಿತ   

ನ್ಯೂಯಾರ್ಕ್‌: ಜಗತ್ತಿನಾದ್ಯಂತ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು 6,00,000 ದಾಟಿವೆ. ಬಹುತೇಕ ರಾಷ್ಟ್ರಗಳು ಲಾಕ್‌ಡೌನ್‌ ಘೋಷಿಸಿವೆ. ಸಂಚಾರ ನಿರ್ಬಂಧ ಹಾಗೂ ಕೈಗಾರಿಕೆಗಳು ಕಾರ್ಯನಿರ್ವಹಿಸದ ಕಾರಣ ತೈಲ ಬೇಡಿಕೆ ಭಾರೀ ಕುಸಿತ ಕಂಡಿದೆ. ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ದರ 22 ಡಾಲರ್‌ ತಲುಪಿದೆ.

ತೈಲ ಸಂಸ್ಕರಣ ಘಟಕಗಳು ಹಾಗೂ ಕಚ್ಚಾ ತೈಲ ಉತ್ಪಾದಕ ಕಂಪನಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ನ್ಯೂಯಾರ್ಕ್‌ನಲ್ಲಿ ತೈಲ ಫ್ಯೂಚರ್ಸ್‌ ಶೇ 4.5ರಷ್ಟು ಕುಸಿದಿದೆ. ಭಾರತದಿಂದ ದಕ್ಷಿಣ ಕೊರಿಯಾ ವರೆಗೂ ಸಂಸ್ಕರಣ ಘಟಕಗಳಿಂದ ಕಚ್ಚಾ ತೈಲ ಬೇಡಿಕೆ ಇಳಿಕೆಯಾಗಿದೆ. ಮುಂದಿನ ತಿಂಗಳಲ್ಲಿ ನಿತ್ಯ ಬಳಕೆ 22 ಮಿಲಿಯನ್‌ ಬ್ಯಾರೆಲ್‌ಗೆ ಇಳಿಯುವ ಸಾಧ್ಯತೆ ಇದೆ.

ಕಳೆದ 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಚ್ಚಾ ತೈಲ ಉತ್ಪಾದಕರು ಉತ್ಪಾದನೆ ಕಡಿತಗೊಳಿಸುವ ಒತ್ತಡಕ್ಕೆ ಒಳಗಾಗಿದ್ದಾರೆ.

ADVERTISEMENT

ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೆಟ್‌ ತೈಲ ಫ್ಯೂಚರ್ಸ್‌ ಪ್ರತಿ ಬ್ಯಾರೆಲ್‌ಗೆ ಶೇ 3.1ರಷ್ಟು ಇಳಿಕೆಯಾಗಿ 21.89 ಡಾಲರ್‌ ತಲುಪಿದೆ. ಬ್ರೆಂಟ್‌ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ ಶೇ 3.4ರಷ್ಟು ಕಡಿಮೆಯಾಗಿ 25.45 ಡಾಲರ್‌ ಮುಟ್ಟಿದೆ.

ತೈಲ ಸಂಗ್ರಹ ಸಾಕಷ್ಟು ಇರುವುದರಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಪಾಕಿಸ್ತಾನ ಗುರುವಾರದಿಂದ ನಿಲ್ಲಿಸಿದೆ.

ಕೆನಡಾದ ಘನವಾದ ಕಚ್ಚಾತೈಲ ದರ ಅತಿ ಕಡಿಮೆ ಮಟ್ಟ ತಲುಪಿದ್ದು, ಅದನ್ನು ಸಂಸ್ಕರಣ ಘಟಕಗಳಿಗೆ ಸಾಗಣೆ ಮಾಡುವ ವೆಚ್ಚ ತೈಲ ದರಕ್ಕಿಂತಲೂ ಅಧಿಕವಾಗಲಿದೆ. ಇದರಿಂದಾಗಿ ಕಚ್ಚಾ ತೈಲ ಉತ್ಪಾದಕರು ಇನ್ನಷ್ಟು ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.