ADVERTISEMENT

ಉತ್ಪಾದನೆ ಕಡಿತ ಒಪ್ಪಂದ ಜುಲೈ ಅಂತ್ಯದವರೆಗೂ ಮುಂದುವರಿಕೆ: ಕಚ್ಚಾ ತೈಲ ದರ ಏರಿಕೆ

ರಾಯಿಟರ್ಸ್
Published 8 ಜೂನ್ 2020, 16:30 IST
Last Updated 8 ಜೂನ್ 2020, 16:30 IST
crude-oil
crude-oil   

ಸಿಂಗಪುರ: ಕಚ್ಚಾತೈಲ ಉತ್ಪಾದಿಸುವ ಪ್ರಮುಖ ದೇಶಗಳು ಉತ್ಪಾದನೆ ಕಡಿತ ಒಪ್ಪಂದವನ್ನು ಒಂದು ತಿಂಗಳವರೆಗೆ ವಿಸ್ತರಿಸಿವೆ. ಇದರಿಂದಾಗಿ ಸೋಮವಾರ ತೈಲ ದರದಲ್ಲಿ ಶೇ 2.1ರವರೆಗೂ ಏರಿಕೆ ಕಂಡುಬಂದಿತು.

ಬ್ರೆಂಟ್‌ ತೈಲ ದರ ಶೇ 2.1ರಷ್ಟು ಹೆಚ್ಚಾಗಿ ಪ್ರತಿ ಬ್ಯಾರಲ್‌ಗೆ 43.19 ಡಾಲರ್‌ಗಳಿಗೆ ತಲುಪಿತು. ಅಮೆರಿಕದ ವೆಸ್ಟ್ ಟೆಕ್ಸಾಸ್‌ ಇಂಟರ್‌ಮಿಡಿಯೇಟ್‌ ದರ್ಜೆಯ (ಡಬ್ಲ್ಯುಟಿಐ) ಕಚ್ಚಾತೈಲ ದರ ಶೇ 1.6ರಷ್ಟು ಹೆಚ್ಚಾಗಿ ಬ್ಯಾರಲ್‌ಗೆ 40.17 ಡಾಲರ್‌ಗಳಿಗೆ ಏರಿಕೆಯಾಗಿದೆ. ಮಾರ್ಚ್‌ 6ರ ನಂತರದ ಗರಿಷ್ಠ ದರ ಇದಾಗಿದೆ.

ಒಪೆಕ್‌, ರಷ್ಯಾ ಮತ್ತು ಇತರೆ ದೇಶಗಳನ್ನು ಒಳಗೊಂಡ ಒಪೆಕ್‌ ಪ್ಲಸ್, ಮೇ–ಜೂನ್‌ ಅವಧಿಗೆ‌ ಪ್ರತಿ ದಿನಕ್ಕೆ 97 ಲಕ್ಷ ಬ್ಯಾರಲ್‌ ಉತ್ಪಾದನೆ ತಗ್ಗಿಸುವ ಕುರಿತುಏಪ್ರಿಲ್‌ನಲ್ಲಿ ನಿರ್ಧಾರ ಕೈಗೊಂಡಿದ್ದವು. ಆ ದಿನದಿಂದ ಇದುವರೆಗೆ ಬ್ರೆಂಟ್ ತೈಲ ದರವು ಎರಡು ಪಟ್ಟು ಹೆಚ್ಚಾಗಿದೆ.

ADVERTISEMENT

ಶನಿವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಸಭೆಯಲ್ಲಿ ಜುಲೈ ಅಂತ್ಯದವರೆಗೂ ಉತ್ಪಾದನೆ ಕಡಿತವನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಸೌದಿ ಅರೇಬಿಯಾವು ಜುಲೈನಲ್ಲಿ ರಫ್ತು ಮಾಡುವ ಕಚ್ಚಾ ತೈಲದ ದರದಲ್ಲಿ ಏರಿಕೆ ಮಾಡಿದೆ.

ತೈಲ ದರ ಇಳಿಮುಖವಾಗಿರುವುದರಿಂದ ಚೀನಾದ ಆಮದು ಪ್ರಮಾಣವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ದಿನಕ್ಕೆ 1.13 ಕೋಟಿ ಬ್ಯಾರಲ್‌ಗೆ ತಲುಪಿದೆ.

ದರ ಏರಿಕೆ: ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಜೂನ್‌ನಲ್ಲಿ ಮಾರಾಟವಾಗಲಿರುವ ಕಚ್ಚಾತೈಲ ದರ ಪ್ರತಿ ಬ್ಯಾರಲ್‌ಗೆ ₹ 29ರಂತೆ ಹೆಚ್ಚಾಗಿದ್ದು ₹ 3,019ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.