ADVERTISEMENT

Trade War: ಕಚ್ಚಾ ತೈಲ ಬೆಲೆ ಕುಸಿತ

ರಾಯಿಟರ್ಸ್
Published 11 ಏಪ್ರಿಲ್ 2025, 15:25 IST
Last Updated 11 ಏಪ್ರಿಲ್ 2025, 15:25 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಂಡನ್‌: ಚೀನಾ ಮತ್ತು ಅಮೆರಿಕದ ನಡುವಿನ ವ್ಯಾಪಾರ ಸಮರದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ.

ಕಳೆದ ವಾರ ಬ್ರೆಂಟ್‌ ಮತ್ತು ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮಿಡಿಯೇಟ್‌ (ಡಬ್ಲ್ಯುಟಿಐ) ಕಚ್ಚಾ ತೈಲ ಬೆಲೆಯು ಶೇ 11ರಷ್ಟು ಇಳಿಕೆ ಕಂಡಿತ್ತು. ಈ ವಾರವೂ ಬ್ರೆಂಟ್‌ ಶೇ 3.8ರಷ್ಟು ಹಾಗೂ ಡಬ್ಲ್ಯುಟಿಐ ಬೆಲೆಯಲ್ಲಿ ಶೇ 3.5ರಷ್ಟು ಕುಸಿತವಾಗಿದೆ. 

ಅಮೆರಿಕ ಮತ್ತು ಚೀನಾ ನಡುವೆ ತಲೆದೋರಿರುವ ವ್ಯಾಪಾರ ಬಿಕ್ಕಟ್ಟು ಆರ್ಥಿಕ ಹಿಂಜರಿತದ ಭೀತಿ ಸೃಷ್ಟಿಸಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ADVERTISEMENT

ಬ್ರೆಂಟ್‌ ಬೆಲೆಯು ಪ್ರತಿ ಬ್ಯಾರೆಲ್‌ಗೆ 63.08 ಡಾಲರ್‌ ಆಗಿದ್ದರೆ, ಡಬ್ಲ್ಯುಟಿಐ ದರವು ಪ್ರತಿ ಬ್ಯಾರೆಲ್‌ಗೆ 59.77 ಡಾಲರ್‌ ಆಗಿದೆ.

ಈ ವಾರದ ವಹಿವಾಟಿನಲ್ಲಿ ಬ್ರೆಂಟ್‌ ಬೆಲೆಯು ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ಗಿಂತ ಕಡಿಮೆ ದಾಖಲಾಗಿತ್ತು. 2021ರ ಫೆಬ್ರುವರಿ ಬಳಿಕ ಅತಿ ಕಡಿಮೆ ದರ ದಾಖಲಾದ ವಾರ ಇದಾಗಿದೆ.

ಅಮೆರಿಕದ ಸರಕುಗಳ ಮೇಲೆ ಚೀನಾ ಕೂಡ ಟ್ರಂಪ್‌ ಆಡಳಿತ ವಿಧಿಸಿರುವಷ್ಟೇ ಸುಂಕ ಹೇರಿದೆ. ಇದರಿಂದ ಮಾರುಕಟ್ಟೆಯಲ್ಲಿ ಅಸ್ಥಿರತೆ ಸೃಷ್ಟಿಯಾಗಿದ್ದು, ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

‘ಟ್ರಂಪ್‌ ಆಡಳಿತದ ಪ್ರತಿ ಸುಂಕ ನೀತಿಯು ಜಾಗತಿಕ ಮಾರುಕಟ್ಟೆಗೆ ಸಾಕಷ್ಟು ಪೆಟ್ಟು ನೀಡಿತ್ತು. ಈಗ ಪ್ರತಿ ಸುಂಕ ಜಾರಿಯನ್ನು 90 ದಿನಗಳವರೆಗೆ ಮುಂದೂಡಲಾಗಿದೆ.  ಆದರೆ, ಬೆಲೆ ಏರಿಕೆಯಿಂದ ತತ್ತರಿಸಿರುವ ಮಾರುಕಟ್ಟೆಯು ಸ್ಥಿರತೆ ಕಾಯ್ದುಕೊಳ್ಳಲು ಹೆಣಗಾಡುವಂತಾಗಿದೆ’ ಎಂದು ಸ್ಯಾಕ್ಸೋ ಬ್ಯಾಂಕ್‌ನ ಸರಕು ವಿಭಾಗದ ಮುಖ್ಯಸ್ಥ ಓಲೆ ಹ್ಯಾನ್ಸೆನ್ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಾಗತಿಕ ಆರ್ಥಿಕತೆಯು ಶೇ 3ಕ್ಕಿಂತ ಕಡಿಮೆ ‍ಪ್ರಗತಿ ಸಾಧಿಸಿದರೆ, ಕಚ್ಚಾ ತೈಲದ ಬಳಕೆಯು ಶೇ 1ರಷ್ಟು ಕಡಿಮೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.