ADVERTISEMENT

ಅಡುಗೆ ಎಣ್ಣೆ ದರ ಏರಿಕೆ ನಿಯಂತ್ರಣ ಕಷ್ಟ: ಹತ್ತೇ ದಿನಗಳಲ್ಲಿ ಟನ್‌ ಬೆಲೆ ₹ 5,783

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 17:05 IST
Last Updated 7 ಮಾರ್ಚ್ 2022, 17:05 IST
ಡಾ. ಖಲೀಲ್‌ ಷಾ
ಡಾ. ಖಲೀಲ್‌ ಷಾ   

ಬೆಂಗಳೂರು: ರಷ್ಯಾ–ಉಕ್ರೇನ್‌ ಯುದ್ಧದಿಂದಾಗಿ ಅಡುಗೆ ಎಣ್ಣೆಯ ದರ ಗಗನಕ್ಕೇರುವುದನ್ನು ನಿಯಂತ್ರಿಸಲು ಯಾವುದೇ ಮಾರ್ಗೋಪಾಯ ಇಲ್ಲ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

‘ದೇಶದಅಡುಗೆ ಎಣ್ಣೆಯ ಒಟ್ಟು ಬೇಡಿಕೆಯಲ್ಲಿ ಶೇ 55ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆಮದಾಗುವ ಕಚ್ಚಾ ಅಡುಗೆ ಎಣ್ಣೆಗಳಲ್ಲಿ, ತಾಳೆ ಎಣ್ಣೆಯ ಪಾಲು ಶೇ 62ರಷ್ಟು, ಸೋಯಾಬೀನ್‌ ಎಣ್ಣೆಯ ಪಾಲು ಶೇ 21ರಷ್ಟು ಹಾಗೂ ಸೂರ್ಯಕಾಂತಿ ಎಣ್ಣೆಯ ಪಾಲು ಶೇ 14ರಷ್ಟಿದೆ’ ಎಂದು ವಿಶ್ಲೇಷಿಸುತ್ತಾರೆ ಸಾಮಾಜಿಕ–ಆರ್ಥಿಕ ತಜ್ಞರು.

‘ಜಗತ್ತಿನ ಒಟ್ಟು ಸೂರ್ಯಕಾಂತಿ ಎಣ್ಣೆ ರಫ್ತಿನಲ್ಲಿ ಉಕ್ರೇನ್‌ ಮತ್ತು ರಷ್ಯಾದ ಪಾಲು ಶೇ 72ರಷ್ಟಿದೆ. ರಷ್ಯಾ–ಉಕ್ರೇನ್‌ ಯುದ್ಧದಿಂದಾಗಿ ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ಸಮಸ್ಯೆ ಆಗಿದೆ. ಹತ್ತೇ ದಿನಗಳಲ್ಲಿ ಪ್ರತಿ ಟನ್‌ ಅಡುಗೆ ಎಣ್ಣೆ ದರ ಸರಿಸುಮಾರು ₹ 5,783ರಷ್ಟು ಹೆಚ್ಚಳವಾಗಿದೆ. ಬೆಲೆ ಹೆಚ್ಚಳ ಇನ್ನಷ್ಟು ಆಗಲಿದೆ’ ಎಂದು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್‌) ತಜ್ಞ ಡಾ. ಖಲೀಲ್‌ ಷಾ ಅಭಿಪ್ರಾಯಪಟ್ಟರು.

ADVERTISEMENT

‘ಉಕ್ರೇನ್‌ ಹವಾಮಾನ ಸೂರ್ಯಕಾಂತಿ ಬೆಳೆಗೆ ಹೇಳಿ ಮಾಡಿಸಿದಂತಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸೂರ್ಯಕಾಂತಿ ಕಟಾವಿಗೆ ಬರುತ್ತಿತ್ತು. ಈಗ ಯುದ್ಧ ನಡೆಯುತ್ತಿರುವುದರಿಂದ ಕಚ್ಚಾ ಎಣ್ಣೆ ಪೂರೈಕೆಗೆ ಏಟು ಬೀಳಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರವೂ ಹೆಚ್ಚಿದೆ. ಅಡುಗೆ ಎಣ್ಣೆಯ ಸಾಗಣೆ ವೆಚ್ಚವೂ ಹೆಚ್ಚಾಗಲಿದ್ದು, ಇದು ಕೂಡ ದರ ಏರಿಕೆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಿದೆ’ ಎಂದು ಅವರು ವಿಶ್ಲೇಷಿಸಿದರು.

ಹಿಂದಿನ ವರ್ಷವೂ ಅಡುಗೆ ಎಣ್ಣೆ ದರ ಗಗನಕ್ಕೇರಿತ್ತು. ಆ ಬಳಿಕ ದೇಶದಲ್ಲಿ ಎಣ್ಣೆಕಾಳು ಬೆಳೆ ಹೆಚ್ಚಿಸಲುಕೇಂದ್ರ ಸರ್ಕಾರ ಅನೇಕ ಉತ್ತೇಜನ ಕ್ರಮಗಳನ್ನು ಕೈಗೊಂಡಿತ್ತು. ಇದರಿಂದಾಗಿ 2021–22ರಲ್ಲಿ ಶೇಂಗಾ, ಸಾಸಿವೆ, ಸೋಯಾಬೀನ್‌, ಸೂರ್ಯಕಾಂತಿ ಸೇರಿದಂತೆ ಒಂಬತ್ತು ಬಗೆಯ ಎಣ್ಣೆಕಾಳು ಉತ್ಪಾದನೆ ಕಳೆದ ಸಾಲಿಗಿಂತ ಶೇ 3.34ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.

‘ದೇಶದಲ್ಲಿ ಎಣ್ಣೆಕಾಳು ಉತ್ಪಾದನೆ ಹೆಚ್ಚಾದರೂ ಅಡುಗೆ ಎಣ್ಣೆ ದರ ಏರಿಕೆಯನ್ನು ತಕ್ಷಣಕ್ಕೆ ತಡೆಯಲು ಆಗದು. ಈ ಹಿಂದೆ ಹಳ್ಳಿ–ಹಳ್ಳಿಗಳಲ್ಲೂ ಎಣ್ಣೆ ತೆಗೆಯುವ ಗಾಣಗಳಿದ್ದವು. ಈ ವ್ಯವಸ್ಥೆ ಸಂಪೂರ್ಣ ನಾಶವಾಗಿದೆ. ಪ್ರಸ್ತುತ ನಮ್ಮ ದೇಶದ ಅಡುಗೆ ಎಣ್ಣೆ ಮಾರುಕಟ್ಟೆ ಕೇವಲ ನಾಲ್ಕೈದು ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿದೆ. ಇಂತಹ ಬಿಕ್ಕಟ್ಟಿನ ಸನ್ನಿವೇಶ ಬಳಸಿಕೊಂಡು ಅವರು ಹೆಚ್ಚು ಲಾಭ ಗಳಿಸಲು ಪ್ರಯತ್ನಿಸುತ್ತಾರೆ’ ಎಂದು ಖಲೀಲ್‌ ಅಭಿಪ್ರಾಯಪಟ್ಟರು.

‘ಅಡುಗೆ ಎಣ್ಣೆ ಮೇಲಿನ ಆಮದು ಸುಂಕವನ್ನು 2022ರ ಮಾರ್ಚ್ ಅಂತ್ಯದವರೆಗೆ ಅನ್ವಯವಾಗುವಂತೆ ಇಳಿಸಲಾಗಿದೆ. ಇದನ್ನು ಸೆಪ್ಟೆಂಬರ್ 30ರವರೆಗೆ ಮುಂದುವರಿಯುವ ಸಾಧ್ಯತೆ ಹೆಚ್ಚು. ಆದರೆ, ಇದು ಕೂಡ ಅಡುಗೆ ಎಣ್ಣೆ ದರ ಇಳಿಸಲು ನೆರವಿಗೆ ಬರುತ್ತದೆ ಎಂದೆನಿಸದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.