ನ್ಯೂಯಾರ್ಕ್/ ವಾಷಿಂಗ್ಟನ್: ‘ಭಾರತದಲ್ಲಿ ಆ್ಯಪಲ್ ಕಂಪನಿಯು ತನ್ನ ತಯಾರಿಕಾ ಘಟಕ ಸ್ಥಾಪಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ಅಲ್ಲಿ ತಯಾರಿಸುವ ಉತ್ಪನ್ನಗಳನ್ನು ಸುಂಕರಹಿತವಾಗಿ ಅಮೆರಿಕದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಪರಮಾಣು ಶಕ್ತಿಗೆ ಮತ್ತಷ್ಟು ಉತ್ತೇಜನ ನೀಡುವುದಕ್ಕೆ ಸಂಬಂಧಿಸಿದಂತೆ ಓವಲ್ ಕಚೇರಿಯಲ್ಲಿ ಶನಿವಾರ ಹಲವು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ ವೇಳೆ ಅವರು ಮಾತನಾಡಿದರು.
‘ಭಾರತದಲ್ಲಿ ಟಿಮ್ ಕುಕ್ ಐಫೋನ್ ತಯಾರಿಕಾ ಘಟಕ ಸ್ಥಾಪಿಸುವುದಿಲ್ಲ ಎಂದುಕೊಂಡಿದ್ದೆ. ಆದರೆ, ಅವರು ಅಲ್ಲಿಗೆ ಹೋಗುವುದಾಗಿ ಹೇಳಿದ್ದಾರೆ. ಅವರ ನಿರ್ಧಾರ ಸರಿಯಾಗಿದೆ. ಆದರೆ, ಸುಂಕ ಪಾವತಿಸದೆಯೇ ಆ್ಯಪಲ್ ಉತ್ಪನ್ನಗಳ ಬಿಕರಿಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.
‘ಅಮೆರಿಕದಲ್ಲಿ ಮಾರಾಟ ಮಾಡುವ ಐಫೋನ್‌ಗಳನ್ನು ಅಮೆರಿಕದಲ್ಲಿಯೇ ತಯಾರಿಕೆ ಮಾಡಬೇಕು ಎಂಬುದು ನನ್ನ ಇಚ್ಛೆಯಾಗಿದೆ’ ಎಂದರು.
ಅಮೆರಿಕದ ಬದಲಾಗಿ ಭಾರತ ಸೇರಿ ವಿಶ್ವದ ಯಾವುದೇ ರಾಷ್ಟ್ರಗಳಲ್ಲಿ ತಯಾರಿಸುವ ಆ್ಯಪಲ್ ಕಂಪನಿಯ ಎಲ್ಲಾ ಉತ್ಪನ್ನಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವುದಾಗಿ ತಮ್ಮ ‘ಟ್ರುತ್ ಸೋಷಿಯಲ್’ ವೇದಿಕೆಯಲ್ಲಿ ಟ್ರಂಪ್ ಪೋಸ್ಟ್ ಹಂಚಿಕೊಂಡಿದ್ದರು.
‘ಸುಂಕ ವಿನಾಯಿತಿಯ ಸೌಲಭ್ಯ ಬೇಕಿದ್ದರೆ ಅಮೆರಿಕದಲ್ಲಿಯೇ ಆ್ಯಪಲ್ ಉತ್ಪನ್ನಗಳನ್ನು ತಯಾರಿಸಬೇಕು ಎಂಬ ಬಗ್ಗೆ ಟಿಮ್ ಕುಕ್‌ಗೆ ಬಹಳ ಹಿಂದೆಯೇ ಮನವರಿಕೆ ಮಾಡಿಕೊಟ್ಟಿದ್ದೇನೆ’ ಎಂದು ಟ್ರಂಪ್ ಹೇಳಿದ್ದಾರೆ.
ಜೂನ್ ತ್ರೈಮಾಸಿಕದಲ್ಲಿ ಅಮೆರಿಕದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್‌ಗಳು ಭಾರತದಿಂದ ಪೂರೈಕೆಯಾಗಲಿವೆ. ವಿಯೆಟ್ನಾಂನಿಂದ ಐಪಾಡ್, ಮ್ಯಾಕ್, ಆ್ಯಪಲ್ ವಾಚ್ ಮತ್ತು ಏರ್‌ಪಾಡ್‌ಗಳು ಸರಬರಾಜಾಗಲಿವೆ ಎಂದು ಇತ್ತೀಚೆಗೆ ಟಿಮ್ ಕುಕ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.