ADVERTISEMENT

ಓಲಾ: 10 ಸುರಕ್ಷತಾ ಸೂತ್ರ

​ಕೇಶವ ಜಿ.ಝಿಂಗಾಡೆ
Published 18 ಮೇ 2020, 5:07 IST
Last Updated 18 ಮೇ 2020, 5:07 IST
ಆನಂದ ಸುಬ್ರಮಣಿಯನ್‌
ಆನಂದ ಸುಬ್ರಮಣಿಯನ್‌   

ಬೆಂಗಳೂರು: ರಾಜ್ಯದಲ್ಲಿನ ಕೋವಿಡ್‌ ಹಸಿರು ಮತ್ತು ಕಿತ್ತಳೆ ಪ್ರದೇಶದ ವ್ಯಾಪ್ತಿಯಲ್ಲಿ ಇರುವ ಐದು ನಗರಗಳಲ್ಲಿ ಸೇವೆ ಪುನರಾರಂಭಿಸಿರುವ ಬಾಡಿಗೆ ಟ್ಯಾಕ್ಸಿ ಸೇವಾ ಸಂಸ್ಥೆ ಓಲಾ, ಚಾಲಕ ಮತ್ತು ಪ್ರಯಾಣಿಕರು ತಲಾ 5 ಸುರಕ್ಷತಾ ಕ್ರಮಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಿದೆ.

ಕೆಂಪು ವಲಯದಲ್ಲಿ ಇರುವ ಬೆಂಗಳೂರಿನಲ್ಲಿ ಸದ್ಯಕ್ಕೆ ತುರ್ತು ಸೇವೆ ಮಾತ್ರ ಒದಗಿಸುತ್ತಿದೆ. ಕೋವಿಡ್‌ಯೇತರ ಆರೋಗ್ಯ ಸಂಬಂಧಿ ಪ್ರಕರಣಗಳಲ್ಲಿ ಆಸ್ಪತ್ರೆಗೆ ಹೋಗಿ ಬರುವವರಿಗೆ ಈ ಸೌಲಭ್ಯ ಸೀಮಿತಗೊಳಿಸಲಾಗಿದೆ.

‘ಮಂಗಳೂರು, ಹುಬ್ಬಳ್ಳಿ – ಧಾರವಾಡ, ಬೆಳಗಾವಿ, ಬಳ್ಳಾರಿ ಮತ್ತು ಕಲಬುರ್ಗಿ ನಗರಗಳಲ್ಲಿ ಓಲಾ ಟ್ಯಾಕ್ಸಿ ಸೇವೆಯಲ್ಲಿ 10 ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ’ ಎಂದು ಕಂಪನಿಯ ವಕ್ತಾರ ಆನಂದ ಸುಬ್ರಮಣಿಯನ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಟ್ಯಾಕ್ಸಿಯು ಕಂಟೈನ್‌ಮೆಂಟ್‌ ವಲಯಕ್ಕೆ ಹೋಗಿ ಬರದಂತೆ ಆ್ಯಪ್‌ನಲ್ಲಿಯೇ ನಿರ್ಬಂಧ ವಿಧಿಸಲಾಗಿದೆ. ಚಾಲಕರು ಮುಖಗವಸು ಧರಿಸಿ ಸೆಲ್ಫಿ ದೃಢೀಕರಿಸಿದ ನಂತರವೇ ಸೇವೆಗೆ ಅವಕಾಶ ಮಾಡಿಕೊಡಲಾಗಿದೆ. ನೈರ್ಮಲ್ಯ ಮತ್ತು ಆರೋಗ್ಯ ಕಿಟ್‌ ಉಚಿತವಾಗಿ ವಿತರಿಸಲಾಗಿದೆ. ಸೇವೆಯ ಆರಂಭ ಮತ್ತು ಕೊನೆಯಲ್ಲಿ ಕಾರ್ ಸ್ವಚ್ಛಗೊಳಿಸುವುದು ಕಡ್ಡಾಯಗೊಳಿಸಲಾಗಿದೆ.

‘ಗ್ರಾಹಕರೂ ಮುಖ ಗವಸು ಧರಿಸುವುದು ಕಡ್ಡಾಯ. ಚಾಲಕ ಮುಖಗವಸು ಧರಿಸಿರದಿದ್ದರೆ ಪ್ರಯಾಣ ರದ್ದುಪಡಿಸುವ ಆಯ್ಕೆ, ಹಿಂಭಾಗದಲ್ಲಿ ಇಬ್ಬರು ಪ್ರಯಾಣಿಕರಿಗೆ ಅವಕಾಶ, ಏರ್‌ಕಂಡಿಷನ್‌ ಸ್ಥಗಿತ, ನಗದು ಪಾವತಿಗೆ ಅವಕಾಶ ಇಲ್ಲದಿರುವ ಸುರಕ್ಷತಾ ನಿಯಮ ಪಾಲಿಸಬೇಕಾಗುತ್ತದೆ.

ಓಲಾ ಫೌಂಡೇಷನ್‌: ‘ಸಂಕಷ್ಟದ ದಿನಗಳಲ್ಲಿ ಚಾಲಕರ ಕುಟುಂಬದ ನೆರವಿಗಾಗಿ ಓಲಾ ಫೌಂಡೇಷನ್‌ ಆಶ್ರಯದಲ್ಲಿ ಹಲವಾರು ಸೌಲಭ್ಯ ಒದಗಿಸಲಾಗಿದೆ.

‘ದೀರ್ಘಾವಧಿ ನೆರವಿನ ‘ಡ್ರೈವ್‌ ದ ಡ್ರೈವರ್‌ ಫಂಡ್‌’ ಯೋಜನೆ ಜಾರಿಗೆ ತರಲಾಗಿದೆ. ಈ ಉದ್ದೇಶಕ್ಕೆ ₹ 50 ಕೋಟಿ ಮೊತ್ತದ ನಿಧಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಕಂಪನಿಯ ಕೊಡುಗೆ ₹ 20 ಕೋಟಿ ಇರಲಿದೆ. ಫೌಂಡೇಷನ್‌ ಮೂಲಕ ಚಾಲಕರ ಕುಟುಂಬಕ್ಕೆ ದವಸ ಧಾನ್ಯಗಳನ್ನು ಪೂರೈಸಲಾಗಿದೆ. ಚಾಲಕರು ‍ಪಾರ್ಟನರ್‌ ಆ್ಯಪ್‌ ಮೂಲಕ ನೆರವು ಪಡೆಯಬಹುದಾಗಿದೆ.

ಡ್ರೈವ್‌ ದ ಡ್ರೈವರ್‌ ಫಂಡ್‌: ‘ಚಾಲಕರ ಕುಟುಂಬದ ಸದಸ್ಯರಿಗಾಗಿ ವೈದ್ಯಕೀಯ ತುರ್ತು ನೆರವನ್ನೂ ಕಲ್ಪಿಸಲಾಗಿದೆ. ಕ್ಯಾನ್ಸರ್‌, ಕಿಮೊ ಥೆರಪಿ, ಹೆರಿಗೆ, ಡಯಾಲಿಸಿಸ್‌ ಸೇರಿದಂತೆ ವಿವಿಧ ಬಗೆಯ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವುದಕ್ಕೆ ಸಹಾಯವಾಣಿ (080–4683 1460) ಆರಂಭಿಸಲಾಗಿತ್ತು. ಇಂತಹ 17 ಸಾವಿರ ಮನವಿಗಳಿಗೆ ಸ್ಪಂದಿಸಲಾಗಿದೆ.

‘ಕಂಪನಿ ಮೂಲಕ ಕಾರ್‌ ಖರೀದಿಸಿದವರು ಸೇವೆ ಕಾರ್ಯಾರಂಭ ಮಾಡುವವರೆಗೆ ಸಾಲದ ಕಂತು ಪಾವತಿಗೆ ವಿನಾಯ್ತಿ ನೀಡಲಾಗಿದೆ. ಕಂಪನಿಯಲ್ಲಿ ಈ ಬಗೆಯಲ್ಲಿ ನೆರವು ಪಡೆದವರ ಪ್ರಮಾಣ ಶೇ 30 ರಿಂದ ಶೇ 40ರಷ್ಟಿದೆ.

ಬಡ್ಡಿ ರಹಿತ ಮುಂಗಡ ನೆರವು: ‘ಬಡ್ಡಿರಹಿತ ನಗದು ನೆರವನ್ನೂ ಕಲ್ಪಿಸಲಾಗಿದೆ. ದಿನನಿತ್ಯದ ಖರ್ಚಿಗೆ ಹಣದ ಅಗತ್ಯ ಇದ್ದವರಿಗೆ ಕೆಲ ಮಾನದಂಡ ಆಧರಿಸಿ ಪ್ರತಿ ವಾರಕ್ಕೆ ಗರಿಷ್ಠ ₹ 1,200ರಂತೆ 3 ರಿಂದ 5 ವಾರಗಳವರೆಗೆ ಹಣಕಾಸು ನೆರವು ಒದಗಿಸಲಾಗಿದೆ. ಮರು ಪಾವತಿಗೆ ಕಂತು ಸೌಲಭ್ಯ ನೀಡಲಾಗಿದೆ.

‘ಚಾಲಕ ಮತ್ತು ಅವರ ಪತ್ನಿ ಒಂದು ವೇಳೆ ಕೋವಿಡ್‌ ಬಾಧಿತರಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದರೆ ಪ್ರತಿ ದಿನಕ್ಕೆ ₹ 1,000 ರಂತೆ ಹಣಕಾಸು ನೆರವನ್ನೂ ಕಲ್ಪಿಸಲಾಗಿದೆ. ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ವೈದ್ಯರ ಉಚಿತ ಸಲಹೆ ಒದಗಿಸಲಾಗಿದೆ’ ಎಂದು ಆನಂದ ವಿವರಿಸಿದ್ದಾರೆ.

2.5 ಲಕ್ಷಕ್ಕೂ ಹೆಚ್ಚು: ದೇಶದಾದ್ಯಂತ ಇರುವ ಚಾಲಕ ಪಾಲುದಾರರು

1 ಲಕ್ಷಕ್ಕೂ ಹೆಚ್ಚು:ಬೆಂಗಳೂರು ಮತ್ತು ರಾಜ್ಯದ ಇತರ ನಗರಗಳಲ್ಲಿನ ಚಾಲಕರು

200-ಓಲಾ ಸೇವೆ ಲಭ್ಯ ಇರುವ ದೇಶದ ನಗರಗಳ ಸಂಖ್ಯೆ

100ಕ್ಕೂ ಹೆಚ್ಚು -ಸೇವೆ ಕಾರ್ಯಾರಂಭಗೊಂಡಿರುವ ನಗರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.