ಬೆಂಗಳೂರು: ಮಾರುಕಟ್ಟೆಯಲ್ಲಿ ಈರುಳ್ಳಿ ಆವಕ ಏರಿಕೆಯಾಗುತ್ತಿದ್ದು, ಸಗಟು ದರ ಇಳಿಕೆಯಾಗಿದೆ. ಇದರಿಂದ ಚಿಲ್ಲರೆ ದರವೂ ಇಳಿಕೆಯ ಹಾದಿ ಹಿಡಿದಿದೆ.
ಒಂದು ತಿಂಗಳ ಹಿಂದೆ ‘ಎ’ ಗ್ರೇಡ್ ಈರುಳ್ಳಿಯ ಸಗಟು ದರವು ಕ್ವಿಂಟಲ್‌ಗೆ ₹7,000ದಿಂದ ₹8,000 ಇತ್ತು. ಸದ್ಯ ₹3,500ರಿಂದ ₹4,000ಕ್ಕೆ ಇಳಿದಿದೆ. ‘ಬಿ’ ಗ್ರೇಡ್ ಈರುಳ್ಳಿ ಧಾರಣೆಯು ಕ್ವಿಂಟಲ್‌ಗೆ ₹3,000ದಿಂದ ₹3,400 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಪ್ರತಿ ಕೆ.ಜಿ ಈರುಳ್ಳಿಯು ₹30ರಿಂದ ₹45ಕ್ಕೆ ಮಾರಾಟವಾಗುತ್ತಿದೆ.
ಸೆಪ್ಟೆಂಬರ್‌ನಲ್ಲಿ ದೇಶದಾದ್ಯಂತ ಈರುಳ್ಳಿ ದರವು ಏರಿಕೆಯ ಪಥ ಹಿಡಿದಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರವು ದೆಹಲಿ ಮತ್ತು ಮುಂಬೈನಲ್ಲಿ ಕೆ.ಜಿಗೆ ₹35 ರಿಯಾಯಿತಿ ದರದಡಿ ಈರುಳ್ಳಿ ಮಾರಾಟಕ್ಕೆ ಚಾಲನೆ ನೀಡಿತ್ತು.
ಕೇಂದ್ರವು ಈರುಳ್ಳಿ ಮೇಲೆ ಶೇ 20ರಷ್ಟು ಕನಿಷ್ಠ ರಫ್ತು ದರ ವಿಧಿಸಿದೆ. ಇದರಿಂದ ವಿದೇಶಗಳಿಗೆ ಈರುಳ್ಳಿ ರವಾನೆ ಕಡಿಮೆಯಾಗಿದೆ.
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕನಿಷ್ಠ ರಫ್ತು ದರವನ್ನು ಹಿಂಪಡೆಯುವಂತೆ ಬೆಳೆಗಾರರಿಂದ ಒತ್ತಾಯ ಕೇಳಿಬಂದಿತ್ತು. ಆದರೆ, ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸುವ ದೃಷ್ಟಿಯಿಂದ ಕೇಂದ್ರವು ಇದನ್ನು ವಾಪಸ್ ಪಡೆಯಲಿಲ್ಲ. ಇದು ಬೆಲೆ ಇಳಿಕೆಗೆ ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಸದ್ಯ ಮಹಾರಾಷ್ಟ್ರದ ಸೊಲ್ಲಾಪುರ ಸೇರಿ ರಾಜ್ಯದ ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆದಿರುವ ಈರುಳ್ಳಿಯು ಇಲ್ಲಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಶನಿವಾರ 51,175 ಚೀಲ (ಪ್ರತಿ ಚೀಲ 50 ಕೆ.ಜಿ) ಆವಕವಾಗಿತ್ತು.
ಮುಂಗಾರಿನಲ್ಲಿ ತಡವಾಗಿ ಬಿತ್ತನೆ ಮಾಡಿರುವ ಹಾಗೂ ಹಿಂಗಾರಿನಲ್ಲಿ ಬಿತ್ತನೆಯಾಗಿರುವ ಈರುಳ್ಳಿಯ ಕಟಾವು ಜನವರಿ ಎರಡನೇ ವಾರದಿಂದ ಆರಂಭವಾಗಲಿದೆ. ಹಿರಿಯೂರು, ಚಿತ್ರದುರ್ಗ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಜಗಳೂರು, ಕೊಟ್ಟೂರು ಭಾಗದಲ್ಲಿ ಬೆಳೆದಿರುವ ಈರುಳ್ಳಿಯ ಕಟಾವು ಇದೇ ವೇಳೆಗೆ ಶುರುವಾಗಲಿದೆ.
‘ಮಹಾರಾಷ್ಟ್ರದ ಸತಾರಾ, ನಾಸಿಕ್, ಪುಣೆ, ಜಲಗಾಂವ್ ಭಾಗದಲ್ಲಿ ಬಿತ್ತನೆಯಾಗಿರುವ ಈರುಳ್ಳಿ ಕಟಾವು ಫೆಬ್ರುವರಿಯಿಂದ ಶುರುವಾಗಲಿದೆ. ಆಗ ಮಾರುಕಟ್ಟೆಗೆ ಹೊಸ ಸರಕಿನ ಆವಕ ಹೆಚ್ಚಲಿದೆ. ಕೇಂದ್ರ ಸರ್ಕಾರವು ಕನಿಷ್ಠ ರಫ್ತು ದರವನ್ನು ವಾಪಸ್ ಪಡೆದರಷ್ಟೇ ದರ ಏರಿಕೆಯಾಗಲಿದೆ. ಇಲ್ಲವಾದರೆ ಮತ್ತಷ್ಟು ಇಳಿಕೆಯಾಗಬಹುದು’ ಎಂದು ಈರುಳ್ಳಿ ಸಗಟು ವ್ಯಾಪಾರಿ ಲೋಕೇಶ್ ಜಿ. ‘ಪ್ರಜಾವಾಣಿ’ಗೆ ತಿಳಿಸಿದರು.
ರೈತರಿಗೆ ದಕ್ಕಿದ ಲಾಭ (ವಿಜಯಪುರ ವರದಿ): ಈ ಬಾರಿ ಜಿಲ್ಲೆಯ ಈರುಳ್ಳಿ ಬೆಳೆಗಾರರಿಗೆ ಉತ್ತಮ ಲಾಭ ಸಿಕ್ಕಿದೆ. ಜಿಲ್ಲೆಯಲ್ಲಿ ಈ ವರ್ಷ 17 ಸಾವಿರ ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇಳುವರಿಯೂ ಚೆನ್ನಾಗಿದೆ. ‘ತಿಂಗಳ ಹಿಂದೆ ಈರುಳ್ಳಿ ಆವಕ ಕಡಿಮೆ ಇತ್ತು. ಇದರಿಂದ ಕ್ವಿಂಟಲ್‌ಗೆ ಗರಿಷ್ಠ ₹7 ಸಾವಿರವರೆಗೆ ದರ ಸಿಕ್ಕಿದೆ. ಸದ್ಯ ಮಾರುಕಟ್ಟೆಗೆ ಆವಕ ಹೆಚ್ಚಾಗಿದೆ. ಕ್ವಿಂಟಲ್‌ಗೆ ₹2500ದಿಂದ ₹3000ದ ವರೆಗೆ ದರ ಇದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲ್ ಭಾವಿದೊಡ್ಡಿ ತಿಳಿಸಿದರು. ‘ಜಿಲ್ಲೆಯ ನಿಡಗುಂದಿ ಕೊಲ್ಹಾರ ಬಬಲೇಶ್ವರ ಮುದ್ದೇಬಿಹಾಳ ಸಿಂದಗಿ ವಿಜಯಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಹುಬ್ಬಳ್ಳಿ ಸೊಲ್ಲಾಪುರ ಬೆಂಗಳೂರು ಮಾರುಕಟ್ಟೆಗೆ ರೈತರು ಕೊಂಡೊಯ್ಯುತ್ತಾರೆ’ ಎಂದರು. ‘ಈ ವರ್ಷ ಉತ್ತಮ ಫಸಲು ಬಂದಿದೆ. ಬೆಳೆಗಾರರಿಗೆ ಗರಿಷ್ಠ ಲಾಭವೂ ಕೈ ಸೇರಿದೆ’ ಎಂದು ಕೊಲ್ಹಾರದ ರೈತ ಯಮನಪ್ಪ ನಾಗರಾಳ ತಿಳಿಸಿದರು. ಮಹಾರಾಷ್ಟ್ರದಿಂದ ಹೆಚ್ಚಿದ ಪೂರೈಕೆ (ಬೆಳಗಾವಿ ವರದಿ): ಇಲ್ಲಿನ ಎಪಿಎಂಸಿಯಲ್ಲಿ ಈರುಳ್ಳಿ ದರ ಕ್ವಿಂಟಲ್‌ಗೆ ₹1 ಸಾವಿರದಿಂದ ₹3500ರವರೆಗೆ ಇದೆ. ಮಾದರಿ ದರ ₹3 ಸಾವಿರ ಇದೆ. 8993 ಕ್ವಿಂಟಲ್ ಆವಕವಾಗಿದ್ದು ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಆವಕವಾಗುತ್ತಿದೆ. ಡಿಸೆಂಬರ್ 14ರಂದು ಕ್ವಿಂಟಲ್‌ಗೆ ₹4500ದ ವರೆಗೂ ರೈತರಿಗೆ ದರ ಲಭಿಸಿತ್ತು. ಗುಣಮಟ್ಟದ ಈರುಳ್ಳಿಯು ಕ್ವಿಂಟಲ್‌ಗೆ ₹5 ಸಾವಿರದವರೆಗೆ ಮಾರಾಟವಾಗಿತ್ತು. ಸದ್ಯ ಆವಕ ಹೆಚ್ಚಳವಾಗಿದೆ. ಇದರಿಂದ ಧಾರಣೆ ಇಳಿಕೆಯಾಗಿದೆ. ಇಳಿದ ಆವಕ (ಬಾಗಲಕೋಟೆ ವರದಿ): ಜಿಲ್ಲೆಯಲ್ಲಿ ಈರುಳ್ಳಿ ಬೆಲೆಯು ಕ್ವಿಂಟಲ್‌ಗೆ ₹3 ಸಾವಿರದಿಂದ ₹3500 ಇದೆ. ಫಸಲು ಮಾರಾಟವು ಬಹುತೇಕ ಮುಗಿಯುತ್ತಾ ಬಂದಿರುವುದರಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆವಕ ಕೂಡ 700ರಿಂದ 1000 ಚೀಲಕ್ಕೆ ಇಳಿದಿದೆ. ‘ನವೆಂಬರ್‌ನಲ್ಲಿ ಈರುಳ್ಳಿ ಬೆಲೆಯು ಕ್ವಿಂಟಲ್‌ಗೆ ₹6 ಸಾವಿರದಿಂದ ₹7 ಸಾವಿರ ಇತ್ತು. ಅಕಾಲಿಕ ಮಳೆ ಸುರಿದ ನಂತರ ಸಾಕಷ್ಟು ಕಡೆ ಈರುಳ್ಳಿ ಬೆಳೆ ಹಾನಿಗೀಡಾಗಿತ್ತು. ಗುಣಮಟ್ಟ ಆಧರಿಸಿ ಬೆಲೆ ನಿಗದಿಯಾಗುತ್ತಿದೆ. ಆರಂಭಕ್ಕೆ ಹೋಲಿಸಿದರೆ ಈಗ ಬೆಲೆ ಕಡಿಮೆಯಾಗಿದೆ’ ಎಂದು ಬಾಗಲಕೋಟೆ ಎಪಿಎಂಸಿ ಕಾರ್ಯದರ್ಶಿ ವಿ.ಡಿ. ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.