ADVERTISEMENT

ದೇಶದ ಪ್ರಮುಖ 15 ನಗರಗಳಲ್ಲಿ ಫೆ. 25ರಂದು ಓಆರ್‌ಡಿಐದಿಂದ ಮ್ಯಾರಥಾನ್‌

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 8:17 IST
Last Updated 18 ಫೆಬ್ರುವರಿ 2024, 8:17 IST
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಓಆರ್‌ಡಿಐ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನಕುಮಾರ್‌ ಶಿರೋಲ್‌, ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಭಟ್‌ ಮತ್ತು ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಸೆಲ್ಯೂಷನ್ಸ್‌ ಇಂಡಿಯಾದ ಉಪಾಧ್ಯಕ್ಷ ಜಿನು ಜೋಸ್‌ ಅವರು, ರೇಸ್‌ಫಾರ್‌ 7 ಮ್ಯಾರಥಾನ್‌ನ ಟೀ ಶರ್ಟ್‌ ಅನ್ನು ಬಿಡುಗಡೆಗೊಳಿಸಿದರು
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಓಆರ್‌ಡಿಐ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನಕುಮಾರ್‌ ಶಿರೋಲ್‌, ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಭಟ್‌ ಮತ್ತು ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಸೆಲ್ಯೂಷನ್ಸ್‌ ಇಂಡಿಯಾದ ಉಪಾಧ್ಯಕ್ಷ ಜಿನು ಜೋಸ್‌ ಅವರು, ರೇಸ್‌ಫಾರ್‌ 7 ಮ್ಯಾರಥಾನ್‌ನ ಟೀ ಶರ್ಟ್‌ ಅನ್ನು ಬಿಡುಗಡೆಗೊಳಿಸಿದರು   

ಬೆಂಗಳೂರು: ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 15 ನಗರಗಳಲ್ಲಿ ಫೆಬ್ರುವರಿ 25ರಂದು ಅತಿ ವಿರಳ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಆರ್ಗನೈಸೇಷನ್‌ ಫಾರ್ ರೇರ್‌ ಡಿಸೀಸಸ್‌ ಇಂಡಿಯಾದಿಂದ (ಓಆರ್‌ಡಿಐ) 7 ಕಿ.ಮೀ ದೂರದಷ್ಟು ಮ್ಯಾರಥಾನ್‌ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ಕುಮಾರ್‌ ಶಿರೋಲ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಅಶೋಕ ನಗರದ ಸೇಂಟ್‌ ಜೋಸೆಫ್ಸ್‌ ಇಂಡಿಯನ್‌ ಹೈಸ್ಕೂಲ್‌ ಮೈದಾನದಿಂದ ಆರಂಭವಾಗಲಿರುವ ಮ್ಯಾರಥಾನ್‌ಗೆ (ರೇಸ್‌ಫಾರ್‌ 7) ನಟ ರಮೇಶ್‌ ಅರವಿಂದ್‌ ಅವರು ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡಲಿದ್ದಾರೆ. ಈ ಜಾಗೃತಿ ಓಟದಲ್ಲಿ ಭಾಗವಹಿಸುವವರು ರೇಸ್‌ಫಾರ್‌ 7 ವೆಬ್‌ಸೈಟ್‌ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದರು.

ದೇಶದಲ್ಲಿರುವ ಅತಿ ವಿರಳವಾದ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಚಿಕಿತ್ಸಾ ಸೌಲಭ್ಯ ಲಭ್ಯವಾಗುವಂತೆ ಮಾಡುವುದು ಈ ಕಾರ್ಯಕ್ರಮ ಉದ್ದೇಶವಾಗಿದೆ ಎಂದು ಹೇಳಿದರು.

ADVERTISEMENT

2016ರಲ್ಲಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷವೂ ಮ್ಯಾರಥಾನ್‌ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದೇವೆ. ಈ ಬಾರಿ ಮ್ಯಾರಥಾನ್‌ 9ನೇ ವರ್ಷದ್ದಾಗಿದೆ ಎಂದರು.

ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಮುಂಬೈ, ನವದೆಹಲಿ, ಹೈದರಾಬಾದ್‌, ಕೋಲ್ಕತ್ತ, ಅಹಮದಾಬಾದ್, ಚೆನ್ನೈ, ಕೊಚ್ಚಿ, ಪುಣೆ, ಕೋಝಿಕ್ಕೋಡ್ ಮತ್ತು ಕೊಯಮತ್ತೂರಿನಲ್ಲಿ ಆಯೋಜಿಸಿರುವ ಮ್ಯಾರಥಾನ್‌ನಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ‘ಒನ್‌ ನೇಷನ್‌, ಒನ್‌ ಡೇ ಟುಗೆದರ್‌ ಫಾರ್‌ ರೇರ್‌’ ಎಂಬ ಥೀಮ್‌ನೊಂದಿಗೆ ಈ ಬಾರಿಯ ಮ್ಯಾರಥಾನ್‌ ನಡೆಯಲಿದೆ ಎಂದು ಪ್ರಸನ್ನ ಹೇಳಿದರು.

ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಭಟ್‌ ಮಾತನಾಡಿ, ದೇಶದಲ್ಲಿ ಅಂದಾಜು 7 ಕೋಟಿ ಜನರು ಈ ಅತಿ ವಿರಳ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಈ ಸಂಖ್ಯೆ 30 ಲಕ್ಷವಿದೆ. ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸರ್ಕಾರವು ಒಬ್ಬರಿಗೆ ಚಿಕಿತ್ಸಾ ವೆಚ್ಚವಾಗಿ ₹50 ಲಕ್ಷ ನೀಡುತ್ತದೆ. ಆದರೆ, ಈ ಮೊತ್ತವು ಅವರಿಗೆ ಸಾಕಾಗುವುದಿಲ್ಲ. ಇವರಿಗೆ ಚಿಕಿತ್ಸೆ ನೀಡಲು ಬೇಕಾದ ಔಷಧಗಳು ಸಮರ್ಪಕವಾಗಿಲ್ಲ. ಆದ್ದರಿಂದ ಈ ಜಾಗೃತಿ ಓಟದ ಮೂಲಕ ಸರ್ಕಾರ ಹಾಗೂ ಜನರಲ್ಲಿ ಅರಿವು ಮೂಡಿಸಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಸೆಲ್ಯೂಷನ್ಸ್‌ ಇಂಡಿಯಾದ ಉಪಾಧ್ಯಕ್ಷ ಜಿನು ಜೋಸ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.