ADVERTISEMENT

ಕೋವಿಡ್‌: ಶೇ 40 ಕಿರು ಉದ್ದಿಮೆಗಳಿಗೆ ಸಿಗದ ಸಾಲ

ಸಾಲಕ್ಕೆ ಅರ್ಜಿ ಸಲ್ಲಿಸಲು ದಾಖಲೆಗಳ ಕೊರತೆ: ಗೇಮ್‌

ಪಿಟಿಐ
Published 27 ನವೆಂಬರ್ 2022, 2:33 IST
Last Updated 27 ನವೆಂಬರ್ 2022, 2:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿಸಾಕಷ್ಟು ಅಡಮಾನ ಇಲ್ಲ ಅಥವಾ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿಲ್ಲ ಎನ್ನುವ ಕಾರಣಕ್ಕೆ ಶೇ 40ರಷ್ಟು ಕಿರು ಉದ್ದಿಮೆಗಳಿಗೆ ಸಾಲವನ್ನು ನಿರಾಕರಿಸಲಾಗಿತ್ತು.

ಗ್ಲೋಬಲ್‌ ಅಲಯನ್ಸ್‌ ಫಾರ್‌ ಮಾಸ್‌ ಎಂಟರ್‌ಪ್ರಿನ್ಯೂರ್‌ಶಿಪ್‌ (ಜಿಎಎಂಇ–ಗೇಮ್) ಈಚೆಗೆ ಬಿಡುಗಡೆ ಮಾಡಿರುವ ‘ಚೇತರಿಕೆಯ ಹಾದಿ: ಭಾರತದಲ್ಲಿ ಕಿರು ಉದ್ದಿಮೆಗಳ ಮೇಲೆ ಕೋವಿಡ್‌–19 ಪರಿಣಾಮದ ಪರಿಶೀಲನೆ’ ಎನ್ನುವ ವರದಿಯಲ್ಲಿ ಈ ಮಾಹಿತಿ ಇದೆ.

ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಶೇ 21ರಷ್ಟು ಕಿರು ಉದ್ದಿಮೆಗಳ ಬಳಿ ಅಗತ್ಯವಾದ ದಾಖಲೆಪತ್ರಗಳೇ ಇರಲಿಲ್ಲ ಎಂದು ತಿಳಿಸಿದೆ.

ADVERTISEMENT

ಲಾಕ್‌ಡೌನ್‌ ಅವಧಿಯಲ್ಲಿ ಮತ್ತು ಆ ಬಳಿಕ ಎಂಎಸ್‌ಎಂಇಗಳು ಎದುರಿಸಿದ ಹಣಕಾಸಿನ ಪರಿಣಾಮಗಳು, ವಹಿವಾಟು ನಡೆಸುವ ವಿಶ್ವಾಸ ಮತ್ತು ಒತ್ತಡ ನಿರ್ವಹಣೆಯ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ‘ಗೇಮ್’ ಹೇಳಿದೆ.

2020 ಮತ್ತು 2021ರಲ್ಲಿ ಎರಡು ಸುತ್ತಿನಲ್ಲಿ ಅಧ್ಯಯನ ನಡೆಸಲಾಗಿದೆ. 1955 ಕಿರು ಉದ್ದಿಮೆಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಕೋವಿಡ್‌ನ ಪರಿಣಾಮಗಳನ್ನು ಕಡಿಮೆ ಮಾಡಲು ಸೂಕ್ತವಾದ ಕಾರ್ಯತಂತ್ರ ಅಥವಾ ಕಾರ್ಯವಿಧಾನವನ್ನೇ ಹೊಂದಿರಲಿಲ್ಲ ಎಂದು ಶೇ 50ರಷ್ಟು ಉದ್ದಿಮೆಗಳು ಹೇಳಿವೆ ಎಂದು ‘ಗೇಮ್’ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾಂಕ್ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು, ಕ್ಷೇತ್ರ ಅಧಿಕಾರಿಗಳು ಮತ್ತು ಬ್ಯಾಂಕಿಂಗ್ ಪ್ರತಿನಿಧಿಗಳು ಉದ್ದಿಮೆಗಳಲ್ಲಿ ತಿಳಿವಳಿಕೆ ಮೂಡಿಸುವ ತುರ್ತು ಅಗತ್ಯ ಇದೆ ಎಂದು ಗೇಮ್‌ ಸ್ಥಾಪಕ ರವಿ ವೆಂಕಟೇಶನ್‌ ಅಭಿಪ್ರಾಪಟ್ಟಿದ್ದಾರೆ.

‘ಆತ್ಮನಿರ್ಭರ ಭಾರತ’ ಕಾರ್ಯಕ್ರಮದಡಿ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಶೇ 31ರಷ್ಟು ಉದ್ದಿಮೆಗಳಿಗೆ ಮಾತ್ರವೇ ಮಾಹಿತಿ ಇದೆ ಎನ್ನುವುದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.