ADVERTISEMENT

5,000 ಉದ್ಯೋಗ ಕಡಿತಗೊಳಿಸಲಿದೆ ಓಯೊ

ಏಜೆನ್ಸೀಸ್
Published 4 ಮಾರ್ಚ್ 2020, 13:29 IST
Last Updated 4 ಮಾರ್ಚ್ 2020, 13:29 IST
ಓಯೊ ಹೊಟೇಲ್ಸ್‌
ಓಯೊ ಹೊಟೇಲ್ಸ್‌   

ಚೀನಾದಲ್ಲಿ ಕೊರೊನಾ ವೈರಸ್‌ ಪರಿಣಾಮ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರಿಂದ 'ಓಯೊ ಹೊಟೇಲ್ಸ್‌' ಜಾಗತಿಕವಾಗಿ 5,000 ಉದ್ಯೋಗ ಕಡಿತಗೊಳಿಸುತ್ತಿದೆ.

ಭಾರತದ ಸ್ಟಾರ್ಟ್‌ಅಪ್‌ ಕಂಪನಿ ಓಯೊ, ಚೀನಾ, ಅಮೆರಿಕ ಮತ್ತು ಭಾರತದಲ್ಲಿ ಉದ್ಯೋಗ ಕಡಿತಗೊಳಿಸುವ ಮೂಲಕ ಲಾಭಾಂಶ ಹೆಚ್ಚಿಸಿಕೊಳ್ಳುವ ಮಾರ್ಗ ಕಂಡುಕೊಂಡಿದೆ. 2013ರಲ್ಲಿ ಸ್ಥಾಪನೆಯಾದ ಓಯೊ ಅತಿ ವೇಗವಾಗಿ ಅಭಿವೃದ್ಧಿ ಕಾಣುವ ಮೂಲಕ ₹73,125 ಕೋಟಿ (10 ಬಿಲಿಯನ್‌ ಡಾಲರ್‌) ಮೌಲ್ಯ ಹೊಂದಿರುವ ಕಂಪನಿಯಾಯಿತು. ಆದರೆ, ಹೂಡಿಕೆದಾರರು ಹಣ ಕಳೆದುಕೊಳ್ಳುತ್ತಿರುವ ವ್ಯಾಪಾರವೆಂದು ಹಿಂದೆ ಸರಿಯಲು ಶುರು ಮಾಡಿದರು.

ಬೆಳವಣಿಗೆ ಮತ್ತು ಲಾಭದಾಯಕ ನಡೆಯ ಮೇಲೆ ಕೇಂದ್ರೀಕರಿಸಿರುವ ಕಂಪನಿ, 2020ರಲ್ಲಿ ಶೇ 17ರಷ್ಟು ಉದ್ಯೋಗ ಕಡಿತಗೊಳಿಸುವ ಉದ್ದೇಶ ಹೊಂದಿದೆ. ಪುನರ್‌ರಚನೆ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ ಜಾಗತಿಕವಾಗಿ ಓಯೊ 25,000 ಉದ್ಯೋಗಗಳನ್ನು ಹೊಂದಿರಲಿದೆ ಎಂದು ಸಿಇಒ ರಿತೇಶ್‌ ಅಗರ್ವಾಲ್‌ ಹೇಳಿದ್ದಾರೆ.

ADVERTISEMENT

ಚೀನಾದಲ್ಲಿ ಕೊರೊನಾ ವೈರಸ್‌ ಪ್ರಭಾವದಿಂದ ಉದ್ಯಮಕ್ಕೆ ಸಂಕಷ್ಟ ಎದುರಾಗಿದ್ದು, 6,000 ಉದ್ಯೋಗಿಗಳ ಪೈಕಿ ಸುಮಾರು ಅರ್ಧದಷ್ಟು ಜನರನ್ನು ಕೆಲಸದಿಂದ ತೆಗೆಯಲು ಕಂಪನಿ ನಿರ್ಧರಿಸಿದೆ.

ಭಾರತದಲ್ಲಿರುವ 10,000 ನೌಕರರ ಪೈಕಿ ಶೇ 12ರಷ್ಟು ಜನರು ಕೆಲಸ ಕಳೆದುಕೊಳ್ಳಲಿದ್ದಾರೆ. ಓಯೊ ಒಟ್ಟು 30,000 ನೌಕರರನ್ನು ಹೊಂದಿದೆ.

20,000ಕ್ಕೂ ಹೆಚ್ಚು ಓಯೊ ಸಂಪರ್ಕಿತ ಹೊಟೇಲ್‌ಗಳಲ್ಲಿ ಆಗಿರುವ ಕೆಟ್ಟ ಅನುಭವಗಳನ್ನು ಗ್ರಾಹಕರು ದಾಖಲಿಸಿರುವುದು, ದೂರುಗಳನ್ನು ನೀಡಿರುವುದು ಕಂಪನಿ ಹೆಸರಿಗೆ ಧಕ್ಕೆ ಉಂಟು ಮಾಡಿದೆ.

ಸಾಫ್ಟ್‌ಬ್ಯಾಂಕ್‌ನ ವಿಷನ್‌ ಫಂಡ್‌ ಈವರೆಗೂ ಓಯೊದಲ್ಲಿ ₹7,317 ಕೋಟಿ (1.5 ಬಿಲಿಯನ್‌ ಡಾಲರ್‌) ಹೂಡಿಕೆ ಮಾಡಿದೆ. ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಓಯೊ, ಕೇವಲ 4 ಡಾಲರ್‌ಗಳಿಗೆ (ಸುಮಾರು ₹290) ಒಂದು ರಾತ್ರಿ ಹೊಟೇಲ್‌ನಲ್ಲಿ ಉಳಿಯುವ ಕೊಡುಗೆಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.