ADVERTISEMENT

ಆರ್ಥಿಕ ಕೊಡುಗೆ| ಆರೋಗ್ಯ ಕ್ಷೇತ್ರದ ನಿರ್ಲಕ್ಷ್ಯ: ಫಿಚ್‌ ಸೊಲುಷನ್ಸ್‌ ವಿಶ್ಲೇಷಣೆ

ಪಿಟಿಐ
Published 21 ಮೇ 2020, 19:30 IST
Last Updated 21 ಮೇ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ : ಕೇಂದ್ರ ಸರ್ಕಾರದ ಆರ್ಥಿಕ ಕೊಡುಗೆಗಳಲ್ಲಿ ಆರೋಗ್ಯ ಕ್ಷೇತ್ರ ತಕ್ಷಣಕ್ಕೆಎದುರಿಸುತ್ತಿರುವ ಗಂಭೀರ ಸ್ವರೂಪದ ಸಮಸ್ಯೆಗಳಿಗೆ ಯಾವುದೇ ಪರಿಹಾರ ಇಲ್ಲ ಎಂದು ಫಿಚ್‌ ಸೊಲುಷನ್ಸ್‌ ತಿಳಿಸಿದೆ.

ಆರೋಗ್ಯ ಕ್ಷೇತ್ರದಲ್ಲಿನ ವೆಚ್ಚ ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವಾಲಯವು ಮಾರ್ಚ್ 11 ರಂದು ಅನುದಾನವನ್ನು ಹೆಚ್ಚಿಸಿತ್ತು. ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 0.008ರಷ್ಟಿದೆ. ಹೆಚ್ಚುವರಿ ಬಜೆಟ್‌ ಅನುದಾನವೂ ಇದಾಗಿಲ್ಲ. ಸದ್ಯದ ವೆಚ್ಚಗಳನ್ನೇ ಮರು ಹೊಂದಾಣಿಕೆ ಮಾಡಲಾಗಿದೆಯಷ್ಟೆ.

‘ಕೋವಿಡ್‌–19’ ಪಿಡುಗಿನಿಂದಾಗಿ ಆರೋಗ್ಯ ಕ್ಷೇತ್ರವು ತೀವ್ರ ಒತ್ತಡ ಎದುರಿಸುತ್ತಿದ್ದರೂ ಸರ್ಕಾರದ ಇತ್ತೀಚಿನ ಕೊಡುಗೆಗಳಲ್ಲಿ ಹೆಚ್ಚುವರಿ ನೆರವು ದೊರೆತಿಲ್ಲ ಎಂದು ಫಿಚ್‌ ಸೊಲುಷನ್ಸ್‌ನ ರಿಸ್ಕ್‌ ಆ್ಯಂಡ್‌ ಇಂಡಸ್ಟ್ರಿ ರಿಸರ್ಚ್‌ ವಿಭಾಗವು ತಿಳಿಸಿದೆ.

ADVERTISEMENT

ಕೋವಿಡ್‌ನಿಂದಾಗಿ ಸೃಷ್ಟಿಯಾಗಿರುವ ಬಿಕ್ಕಟ್ಟು, ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುವ ಅನಿವಾರ್ಯತೆ ಸೃಷ್ಟಿಸಿದೆ. ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದರೂ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಾಣು ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ದೇಶಿ ಆರೋಗ್ಯ ಕ್ಷೇತ್ರದಿಂದ ಸಾಧ್ಯವಾಗುತ್ತಿಲ್ಲ.

ಸೂಕ್ತ ರೀತಿಯಲ್ಲಿ ವೈರಾಣು ಸೋಂಕು ನಿಯಂತ್ರಿಸದಿದ್ದರೆ, ಈ ಪಿಡುಗು ಇನ್ನಷ್ಟು ವಿಷಮಗೊಳ್ಳಲಿದೆ. ವೈದ್ಯಕೀಯ ನೆರವು ಹೆಚ್ಚಿಸುವ ಮತ್ತು ಆರೋಗ್ಯ ರಕ್ಷಣೆಯ ಮೂಲ ಸೌಕರ್ಯಗಳನ್ನು ವಿಸ್ತರಿಸುವ ಅಗತ್ಯ ಹೆಚ್ಚಿದೆ.

ಹೆಚ್ಚುವರಿ ಅನುದಾನ ಮತ್ತು ಸೌಲಭ್ಯಗಳ ಕೊರತೆ, ಅದಕ್ಷ ಕಾರ್ಯನಿರ್ವಹಣೆಯಿಂದ ಸರ್ಕಾರಿ ವಲಯದ ಆಸ್ಪತ್ರೆಗಳಿಂದ ಜನರ ಹೆಚ್ಚುತ್ತಿರುವ ಅಗತ್ಯಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.

ಅಗತ್ಯ ಇರುವಷ್ಟು ಹಣ ಬಿಡುಗಡೆ ಮಾಡದಿರುವುದರಿಂದ ಸರ್ಕಾರಿ ಆರೋಗ್ಯ ಸೇವೆಯ ಗುಣಮಟ್ಟ ಕಳಪೆಯಾಗಿರಲಿದೆ. ಹೆಚ್ಚು ಜನರಿಗೆ ಆರೋಗ್ಯ ಸೇವೆ ತಲುಪಿಸಲೂ ಸಾಧ್ಯವಾಗುವುದಿಲ್ಲ.

ಕೋವಿಡ್‌ ಬಿಕ್ಕಟ್ಟಿಗೆ ಖಾಸಗಿ ಆಸ್ಪತ್ರೆಗಳು ಸೂಕ್ತವಾಗಿ ಸ್ಪಂದಿಸಲಾರವು. ಕೆಲ ಆಸ್ಪತ್ರೆಗಳು ಕೋವಿಡ್‌ಯೇತರ ಪ್ರಕರಣಗಳಿಗೆ ಚಿಕಿತ್ಸೆ ನೀಡಲೂ ಹಿಂದೇಟು ಹಾಕುತ್ತಿವೆ. ಆಸ್ಪತ್ರೆ ಹಾಸಿಗೆಗಳಲ್ಲಿನ ಖಾಸಗಿ ಆಸ್ಪತ್ರೆಗಳ (2/3) ಪಾಲು ಎರಡು ಮೂರಾಂಶದಷ್ಟಿದೆ. ವರಮಾನ ಮತ್ತು ಲಾಭದಲ್ಲಿನ ಕುಸಿತದ ಕಾರಣಕ್ಕೆ ಹಲವಾರು ಖಾಸಗಿ ಆಸ್ಪತ್ರೆಗಳು ಬಾಗಿಲು ಹಾಕುವ ಪರಿಸ್ಥಿತಿ ಉದ್ಬವಿಸಲಿದೆ. ಕೆಲವು ಖಾಸಗಿ ಆಸ್ಪತ್ರೆಗಳು ಮಾತ್ರ ಸರ್ಕಾರದ ಪ್ರಯತ್ನಕ್ಕೆ ಕೈ ಜೋಡಿಸಿವೆ.

ಈ ಎಲ್ಲ ಕೊರತೆಗಳ ಮಧ್ಯೆ, ಸದ್ಯದ ಅಗತ್ಯ ಈಡೇರಿಸಲು ಸರ್ಕಾರಿ ಆಸ್ಪತ್ರೆಗಳು ಮಹತ್ವದ ಪಾತ್ರ ನಿರ್ವಹಿಸಬೇಕಾಗಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.