ADVERTISEMENT

ಎಂಎಸ್‌ಪಿ: ಭತ್ತ ಖರೀದಿ ಆರಂಭ

ಕ್ವಿಂಟಲ್‌ಗೆ ₹ 1,868: ಕೃಷಿ ಸಚಿವಾಲಯ ಮಾಹಿತಿ

ಪಿಟಿಐ
Published 28 ಸೆಪ್ಟೆಂಬರ್ 2020, 20:25 IST
Last Updated 28 ಸೆಪ್ಟೆಂಬರ್ 2020, 20:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಅಡಿ ಅಂದಾಜು 5,637 ಟನ್ ಭತ್ತವನ್ನು ಹರಿಯಾಣ ಮತ್ತು ಪಂಜಾಬ್‌ನ ರೈತರಿಂದ ಖರೀದಿಸಲಾಗಿದೆ. ಇನ್ನುಳಿದ ರಾಜ್ಯಗಳ ರೈತರಿಂದ ಭತ್ತ ಖರೀದಿಯು ಸೋಮವಾರದಿಂದ ಆರಂಭವಾಗಿದೆ’ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ. ಎಂಎಸ್‌ಪಿ ಯೋಜನೆಯ ಅಡಿ ಪ್ರತಿ ಕ್ವಿಂಟಾಲ್ ಭತ್ತಕ್ಕೆ ₹ 1,868 ಪಾವತಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಸಚಿವಾಲಯ ನೀಡಿರುವ ಮಾಹಿತಿ ಅನ್ವಯ, 48 ಗಂಟೆಗಳ ಅವಧಿಯಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರೈತರಿಂದ ಒಟ್ಟು ₹ 10.53 ಕೋಟಿ ಮೊತ್ತದ ಭತ್ತ ಖರೀದಿಸಲಾಗಿದೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಹೊಸ ಕಾನೂನು ವಿರೋಧಿಸಿ ರೈತರಿಂದ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಹೇಳಿಕೆ ಬಂದಿದೆ.

ಮುಂಗಾರು ಅವಧಿಯಲ್ಲಿ ಒಟ್ಟು 495.37 ಲಕ್ಷ ಟನ್ ಭತ್ತ ಖರೀದಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಸರ್ಕಾರವು ತನ್ನ ನೋಡಲ್ ಸಂಸ್ಥೆಗಳ ಮೂಲಕ ಒಟ್ಟು ₹ 25 ಲಕ್ಷ ಮೌಲ್ಯದ 34.20 ಟನ್ ಹೆಸರುಕಾಳನ್ನು ತಮಿಳುನಾಡಿನ ರೈತರಿಂದ ಖರೀದಿಸಿದೆ.

ADVERTISEMENT

ಅದೇ ರೀತಿ, ಒಟ್ಟು ₹ 52.40 ಕೋಟಿ ಮೊತ್ತದ 5,089 ಟನ್ ಕೊಬ್ಬರಿ ಖರೀದಿಸಲಾಗಿದೆ. ಇದರಿಂದಾಗಿ ಕರ್ನಾಟಕ ಮತ್ತು ತಮಿಳುನಾಡಿನ 3,961 ರೈತರಿಗೆ ಪ್ರಯೋಜನ ಆಗಿದೆ ಎಂದು ಸಚಿವಾಲಯ ತಿಳಿಸಿದೆ.

ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಹರಿಯಾಣದ ರೈತರಿಂದ ಒಟ್ಟು 13.77 ಲಕ್ಷ ಟನ್ ಧಾನ್ಯಗಳು ಹಾಗೂ ಎಣ್ಣೆಕಾಳುಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ.

‘ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಂಗಾರು ಅವಧಿಯಲ್ಲಿ ಬೆಳೆದ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಬೆಲೆಯು ಎಂಎಸ್‌ಪಿಗಿಂತ ಕಡಿಮೆ ಆದರೆ, ಅವುಗಳ ಖರೀದಿಗೆ ಪ್ರಸ್ತಾವನೆ ಬಂದ ತಕ್ಷಣ ಅನುಮತಿ ನೀಡಲಾಗುವುದು’ ಎಂದು ಕೂಡ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.