ADVERTISEMENT

ಪ್ರಯಾಣಿಕ ವಾಹನ ರಫ್ತು ಶೇ 43ರಷ್ಟು ಹೆಚ್ಚಳ

ಪಿಟಿಐ
Published 18 ಏಪ್ರಿಲ್ 2022, 10:39 IST
Last Updated 18 ಏಪ್ರಿಲ್ 2022, 10:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಿಂದ ಪ್ರಯಾಣಿಕ ವಾಹನಗಳ ರಫ್ತು 2020–21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2021–22ನೇ ಹಣಕಾಸು ವರ್ಷದಲ್ಲಿ ಶೇಕಡ 43ರಷ್ಟು ಹೆಚ್ಚಾಗಿದೆ. ಅತಿ ಹೆಚ್ಚು ಪ್ರಯಾಣಿಕ ವಾಹನ ರಫ್ತು ಮಾಡಿರುವ ಕಂಪನಿಗಳ ಸಾಲಿನಲ್ಲಿ ಮಾರುತಿ ಸುಜುಕಿ ಇಂಡಿಯಾ ಮೊದಲ ಸ್ಥಾನದಲ್ಲಿದೆ.

2020–21ರಲ್ಲಿ 4.04 ಲಕ್ಷ ಪ್ರಯಾಣಿಕ ವಾಹನಗಳನ್ನು ರಫ್ತು ಮಾಡಲಾಗಿತ್ತು. 2021–22ರಲ್ಲಿ ಇದು 5.77 ಲಕ್ಷಕ್ಕೆ ಏರಿಕೆ ಆಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಸೋಮವಾರ ಮಾಹಿತಿ ನೀಡಿದೆ.

ಪ್ರಯಾಣಿಕ ಕಾರು ರಫ್ತು ಶೇ 42ರಷ್ಟು ಹೆಚ್ಚಾಗಿದ್ದು 3.74 ಲಕ್ಷಕ್ಕೆ ತಲುಪಿದೆ. ಯುಟಿಲಿಟಿ ವಾಹನಗಳ ರಫ್ತು ಪ್ರಮಾಣವು ಶೇ 46ರಷ್ಟು ಹೆಚ್ಚಾಗಿದೆ.

ADVERTISEMENT

ಬೇಡಿಕೆ ಹೆಚ್ಚಾಗಿರುವುದು ಹಾಗೂ ರಫ್ತು ಮಾಡುವ ಉತ್ಪನ್ನಗಳಿಗೆ ಸೆಮಿಕಂಡಕ್ಟರ್‌ ಚಿಪ್‌ ಸಾಕಷ್ಟು ಲಭ್ಯ ಇರುವುದರಿಂದ ರಫ್ತು ಪ್ರಮಾಣ ಹೆಚ್ಚಾಗಿದೆ ಎಂದು ಮಾರುತಿ ಸುಜುಕಿ ಕಂಪನಿಯ ಸಿಇಒ ಹಿಸಾಶಿ ಟೇಕುಚಿ ತಿಳಿಸಿದ್ದಾರೆ.

ರೆನೊ ಇಂಡಿಯಾ 24,117 ವಾಹನಗಳನ್ನು ಮತ್ತು ಹೋಂಡಾ ಕಾರ್ಸ್‌ 19,333 ವಾಹನಗಳನ್ನು ರಫ್ತು ಮಾಡಿವೆ.

ರಫ್ತು ವಿವರ

ವಾಹನ; 2020–21; 2021–22

ಮಾರುತಿ; 94,938; 2.35 ಲಕ್ಷ

ಹುಂಡೈ; 1.04 ಲಕ್ಷ; 1.29 ಲಕ್ಷ

ಕಿಯಾ ಇಂಡಿಯಾ; 40,458; 50,864

ಫೋಕ್ಸ್‌ವ್ಯಾಗನ್‌; 31,089; 43,033

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.