ADVERTISEMENT

ಜನವರಿ: ಪ್ರಯಾಣಿಕರ ವಾಹನ ಮಾರಾಟ ಶೇ 5ರಷ್ಟು ಕುಸಿತ

ಪಿಟಿಐ
Published 21 ಫೆಬ್ರುವರಿ 2020, 19:30 IST
Last Updated 21 ಫೆಬ್ರುವರಿ 2020, 19:30 IST
   

ನವದೆಹಲಿ: ಈ ವರ್ಷದ ಜನವರಿಯಲ್ಲಿ 2,90,879 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದು, 2019ರ ಇದೇ ಅವಧಿಯಲ್ಲಿನ (3,04,929) ಮಾರಾಟಕ್ಕೆ ಹೋಲಿಸಿದರೆ ಶೇ 4.61ರಷ್ಟು ಕಡಿಮೆಯಾಗಿದೆ.

ದೇಶದಲ್ಲಿನ 1,432 ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್‌ಟಿಒ) ಪೈಕಿ 1,223 ಕಚೇರಿಗಳಿಂದ ಸಂಗ್ರಹಿಸಿರುವ ವಾಹನಗಳ ನೋಂದಣಿ ಆಧರಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಗ್ರಾಹಕರಲ್ಲಿ ಖರೀದಿ ಉತ್ಸಾಹವು ಈಗಲೂ ಕಡಿಮೆ ಮಟ್ಟದಲ್ಲಿ ಇದೆ’ ಎಂದು ಆಟೊಮೊಬೈಲ್‌ ಡೀಲರ್ಸ್‌ ಸಂಘಗಳ ಒಕ್ಕೂಟವು (ಎಫ್‌ಎಡಿಎ) ತಿಳಿಸಿದೆ.

‘ತ್ರಿಚಕ್ರ ಹೊರತುಪಡಿಸಿ ಉಳಿದೆಲ್ಲ ಬಗೆಯ ವಾಹನಗಳ ಮಾರಾಟವು ಕಡಿಮೆಯಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಾಹನ ಉದ್ದಿಮೆಯು ಬಿಎಸ್‌4 ನಿಂದ ಬಿಎಸ್‌6ಗೆ ಬದಲಾಗುವ ಕಾಲಘಟ್ಟದಲ್ಲಿ ಇದೆ. ಇದು ಕೂಡ ವಾಹನ ಖರೀದಿ ನಿರ್ಧಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಿವಿಧ ಬಗೆಯ ವಾಹನಗಳ ಒಟ್ಟಾರೆ ಮಾರಾಟವು ಶೇ 71.7ರಷ್ಟು ಕಡಿಮೆಯಾಗಿದೆ’ ಎಂದು ‘ಎಫ್‌ಎಡಿಎ’ ಅಧ್ಯಕ್ಷ ಆಶೀಷ್‌ ಹರ್ಷರಾಜ್‌ ಕಾಳೆ ಹೇಳಿದ್ದಾರೆ.

ADVERTISEMENT

‘ಆರ್ಥಿಕತೆಯ ಎಲ್ಲ ವಲಯಗಳಲ್ಲಿ ಉತ್ಸಾಹಕರ ವಾತಾವರಣ ಕಂಡು ಬರುತ್ತಿಲ್ಲ. ಮುಂದಿನ ಹಣಕಾಸು ವರ್ಷದ ಬಜೆಟ್‌ನಲ್ಲಿ ವಾಹನ ತಯಾರಿಕೆ ಉದ್ದಿಮೆಗೆ ಉತ್ತೇಜನ ನೀಡುವಂತಹ ಪ್ರಸ್ತಾವಗಳೂ ಇಲ್ಲ.

‘ಖರೀದಿದಾರರಲ್ಲಿ ಮನೆ ಮಾಡಿರುವ ನಿರುತ್ಸಾಹ, ಮಂದಗತಿಯಲ್ಲಿ ಇರುವ ಆರ್ಥಿಕತೆ ಹಾಗೂ ಬಿಎಸ್‌6ಗೆ ಬದಲಾಗುವುದು ವಾಹನಗಳ ಖರೀದಿ ಉತ್ಸಾಹದ ಮೇಲೆ ಇನ್ನೂ ಕೆಲ ದಿನಗಳವರೆಗೆ ಪ್ರತಿಕೂಲ ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರವು ಉದ್ದಿಮೆಗೆ ಉತ್ತೇಜನ ನೀಡುವ ಕ್ರಮಗಳನ್ನು ಸಾಧ್ಯವಾದಷ್ಟು ಬೇಗ ಪ್ರಕಟಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.