ADVERTISEMENT

ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 8ರಷ್ಟು ಇಳಿಕೆ

ತಯಾರಿಕೆ ತಗ್ಗಿಸಿದ ಸೆಮಿಕಂಡಕ್ಟರ್‌ ಚಿಪ್‌ ಕೊರತೆ

ಪಿಟಿಐ
Published 11 ಫೆಬ್ರುವರಿ 2022, 10:47 IST
Last Updated 11 ಫೆಬ್ರುವರಿ 2022, 10:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸೆಮಿಕಂಡಕ್ಟರ್‌ ಕೊರತೆಯಿಂದ ವಾಹನಗಳ ತಯಾರಿಕೆಗೆ ತಗ್ಗಿದೆ. ಹೀಗಾಗಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಜನವರಿಯಲ್ಲಿ ಶೇ 8ರಷ್ಟು ಇಳಿಕೆ ಕಂಡಿದೆ ಎಂದು ಭಾರತೀಯ ವಾಹನ ತಯಾರಕ ಕಂಪನಿಗಳ ಒಕ್ಕೂಟ (ಎಸ್‌ಐಎಎಂ) ಶುಕ್ರವಾರ ತಿಳಿಸಿದೆ.

2021ರ ಜನವರಿಯಲ್ಲಿ 2.76 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿದ್ದವು. 2022ರ ಜನವರಿಯಲ್ಲಿ ಈ ಸಂಖ್ಯೆಯು 2.54 ಲಕ್ಷಕ್ಕೆ ಇಳಿಕೆ ಆಗಿದೆ. ಪ್ರಯಾಣಿಕ ಕಾರು ಮಾರಾಟವು 1.53 ಲಕ್ಷದಿಂದ 1.26 ಲಕ್ಷಕ್ಕೆ ಇಳಿಕೆ ಆಗಿದೆ. ವ್ಯಾನ್‌ ಮಾರಾಟ 11,816 ರಿಂದ 10,632ಕ್ಕೆ ಇಳಿಕೆ ಕಂಡಿದೆ. ಆದರೆ, ಯುಟಿಲಿಟಿ ವಾಹನಗಳ ಮಾರಾಟ 1.11 ಲಕ್ಷದಿಂದ 1.16 ಲಕ್ಷಕ್ಕೆ ಏರಿಕೆ ಆಗಿದೆ. ದ್ವಿಚಕ್ರ ವಾಹನ ಮಾರಾಟ 14.29 ಲಕ್ಷದಿಂದ 11.28 ಲಕ್ಷಕ್ಕೆ ಶೇ 21ರಷ್ಟು ಇಳಿಕೆ ಆಗಿದೆ. ಅದೇ ರೀತಿ ತ್ರಿಚಕ್ರ ವಾಹನಗಳ ಮಾರಾಟ 26,794 ರಿಂದ 24,091ಕ್ಕೆ ಇಳಿಕೆ ಆಗಿದೆ.

ಸೆಮಿಕಂಡಕ್ಟರ್‌ ಕೊರತೆ ಮತ್ತು ಓಮೈಕ್ರಾನ್‌ ಆತಂಕದಿಂದಾಗಿ 2022ರ ಜನವರಿಯಲ್ಲಿ ಮಾರಾಟ ಇಳಿಕೆ ಕಂಡಿದೆ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್‌ ಮೆನನ್‌ ತಿಳಿಸಿದ್ದಾರೆ.

ADVERTISEMENT

ಚಿಪ್‌ ಕೊರತೆಯಿಂದಾಗಿ ಪ್ರಯಾಣಿಕ ವಾಹನಗಳ ತಯಾರಿಕೆಗೆ ತಗ್ಗಿತು. ಇದರಿಂದಾಗಿ ಮಾರುಕಟ್ಟೆ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ದೇಶದ ಪ್ರಮುಖ ಕಂಪನಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮರಾಟವು 1.39 ಲಕ್ಷದಿಂದ 1.28 ಲಕ್ಷಕ್ಕೆ ಇಳಿಕೆ ಆಗಿದೆ. ಹುಂಡೈ ಮಾರಾಟವು 52,005 ರಿಂದ 44,002ಕ್ಕೆ ಇಳಿಕೆ ಕಂಡಿದೆ ಎಂದು ಅದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.