ADVERTISEMENT

ಯಶ ಕಾಣದ ಪೇಮೆಂಟ್ಸ್‌ ಬ್ಯಾಂಕ್‌

ವಿಶ್ವನಾಥ ಎಸ್.
Published 12 ನವೆಂಬರ್ 2019, 19:31 IST
Last Updated 12 ನವೆಂಬರ್ 2019, 19:31 IST
ಪೇಮೆಂಟ್ಸ್‌ ಬ್ಯಾಂಕ್‌
ಪೇಮೆಂಟ್ಸ್‌ ಬ್ಯಾಂಕ್‌   

ಸಣ್ಣ ವ್ಯಾಪಾರಿಗಳು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಸಮಗ್ರ ಹಣಕಾಸು ಸೇವಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಪೇಮೆಂಟ್ಸ್‌ ಬ್ಯಾಂಕ್‌ಗಳ ಸ್ಥಾಪನೆಗೆ ಅವಕಾಶ ಕೊಡಲಾಗಿತ್ತು. ಇದು, ಕೇಂದ್ರ ಸರ್ಕಾರದ ಜನಪ್ರಿಯ ‘ವಿತ್ತೀಯ ಸೇರ್ಪಡೆ’ ಕಾರ್ಯಕ್ರಮದ ಒಂದು ಭಾಗವೂ ಹೌದು.

ಭಾರತೀಯ ರಿಸರ್ವ್‌ ಬ್ಯಾಂಕ್‌ 2014ರಲ್ಲಿ 11 ಬ್ಯಾಂಕ್‌ಗಳ ಸ್ಥಾಪನೆಗೆ ಅನುಮತಿ ನೀಡಿತು. ಎಟಿಎಂ, ಪಾಯಿಂಟ್ ಆಫ್ ಸೇಲ್ ಯಂತ್ರ, ಮೊಬೈಲ್ ಬ್ಯಾಂಕಿಂಗ್ ಮೂಲಕ ಪಾವತಿ ಮತ್ತು ಹಣ ವರ್ಗಾವಣೆ ಸೇವೆ ಒದಗಿಸುವಿಕೆಯಂತಹ ಸೌಲಭ್ಯಗಳಿಂದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಮೂಡಿಸಲಿವೆ ಎನ್ನುವ ವಿಶ್ವಾಸವಿತ್ತು. ಆದರೆ, ಸದ್ಯ ಕಾರ್ಯಾಚರಣೆ ನಡೆಸುತ್ತಿರುವುದು 4 ಬ್ಯಾಂಕ್‌ಗಳು ಮಾತ್ರವೇ.

ಭಾರತದಲ್ಲಿ ವೊಡಾಫೋನ್‌ ಮತ್ತು ಐಡಿಯಾ ವಿಲೀನದ ನಿರ್ಧಾರದಿಂದಜುಲೈ 15ರಂದು ವೊಡಾಫೋನ್‌ ಎಂ–ಪೇಸಾ ಕಾರ್ಯಾಚರಣೆ ನಿಲ್ಲಿಸಲಾಗಿದೆ. 2019ರ ಅಕ್ಟೋಬರ್‌ 18ರಂದು ಆದಿತ್ಯ ಬಿರ್ಲಾ ಪೇಮೆಂಟ್ಸ್‌ ಬ್ಯಾಂಕ್‌ (ಎಬಿಪಿಬಿ) ಕಾರ್ಯಾಚರಣೆ ನಿಲ್ಲಿಸುವ ನಿರ್ಧಾರವನ್ನು ಘೋಷಿಸಲಾಯಿತು. ಐಡಿಯಾ ಸೆಲ್ಯುಲರ್ ಮತ್ತು ಆದಿತ್ಯ ಬಿರ್ಲಾ ಜಂಟಿಯಾಗಿ ಇದನ್ನು ನಿರ್ವಹಿಸುತ್ತಿದ್ದವು. ಆರ್ಥಿಕವಾಗಿ ಕಾರ್ಯಸಾಧುವಲ್ಲ ಎನ್ನುವುದು ಇಲ್ಲಿ ಪೇಮೆಂಟ್ಸ್‌ ಬ್ಯಾಂಕ್‌ ವಹಿವಾಟು ಮುಚ್ಚಲು ನೀಡಿರುವ ಪ್ರಮುಖ ಕಾರಣ.

ADVERTISEMENT

ವಹಿವಾಟು ಮಿತಿ, ಸಾಲ ನೀಡಿಕೆಗೆ ಅವಕಾಶ ಇಲ್ಲದೇ ಇರುವುದು, ಮ್ಯೂಚುವಲ್‌ ಫಂಡ್‌, ವಿಮೆಯಂತಹ ಥರ್ಡ್‌ಪಾರ್ಟಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಇಲ್ಲದೇ ಇರುವುದರಿಂದ ವಾಣಿಜ್ಯ ಬ್ಯಾಂಕ್‌ಗಳ ಜತೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಕೆಲವು ಕಂಪನಿಗಳ ವಹಿವಾಟಿನಲ್ಲಿ ಆಗಿರುವ ಬದಲಾವಣೆಯಿಂದಲೂ ಅವುಗಳು ತಮ್ಮ ಪೇಮೆಂಟ್ಸ್‌ ಬ್ಯಾಂಕ್‌ ಮುಚ್ಚಲು ಕಾರಣವಾಗಿದೆ.

ಮೊದಲ ಪಾವತಿ ಬ್ಯಾಂಕ್‌: 2016ರ ನವೆಂಬರ್‌ 22ರಂದು ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್‌ ರಾಜಸ್ಥಾನದಲ್ಲಿ ಪ್ರಾಯೋಗಿಕವಾಗಿ ತನ್ನ ಕಾರ್ಯಾಚರಣೆಯನ್ನು ಆರಂಭಿಸುವ ಮೂಲಕ ಮೊದಲ ಪಾವತಿ ಬ್ಯಾಂಕ್ ಆಗಿ ಜನ್ಮ ತಾಳಿತು. ಭಾರ್ತಿ ಏರ್‌ಟೆಲ್‌ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕಿನ ಜಂಟಿ ಬಂಡವಾಳದೊಂದಿಗೆ ಸ್ಥಾಪಿತವಾದ ಈ ಪಾವತಿ ಬ್ಯಾಂಕು, ಕ್ರಮೇಣ ಏರ್‌ಟೆಲ್‌ ರಿಟೇಲ್‌ ಮಳಿಗೆಗಳನ್ನು ಬ್ಯಾಂಕಿನ ವ್ಯವಹಾರ ಕೇಂದ್ರಗಳನ್ನಾಗಿ ಪರಿವರ್ತಿಸಿದೆ.

ಭಾರತೀಯ ಅಂಚೆ ಪಾವತಿ ಬ್ಯಾಂಕ್‌ (ಐಪಿಪಿಬಿ): 11 ಬ್ಯಾಂಕ್‌ಗಳಲ್ಲಿ ಭಾರತೀಯ ಅಂಚೆ ಪಾವತಿ ಬ್ಯಾಂಕ್‌ ಮಾತ್ರವೇ ಸಂಪೂರ್ಣ ಸರ್ಕಾರಿ ಸ್ವಾಮ್ಯದ್ದಾಗಿದೆ. ಅಂಚೆ ಕಚೇರಿಗಳ ಸಂಪರ್ಕದೊಂದಿಗೆ ಸೇವೆ ಒದಗಿಸುತ್ತಿದೆ.

ಅನುಮತಿ ದೊರೆತಿರುವುದು

*ಆದಿತ್ಯ ಬಿರ್ಲಾ ಪೇಮೆಂಟ್ಸ್‌ ಬ್ಯಾಂಕ್‌

*ಎಂ–ಪೇಸಾ

*ಟೆಕ್‌ ಮಹೀಂದ್ರಾ ಲಿಮಿಟೆಡ್

*ಚೋಳಮಂಡಳಂ ಡಿಸ್ಟ್ರಿಬ್ಯೂಷನ್‌ ಸರ್ವೀಸಸ್‌ ಲಿಮಿಟೆಡ್

*ದಿಲೀಪ್‌ ಶಾಂತಿಲಾಲ್‌ ಸಾಂಘ್ವಿ

*ನ್ಯಾಷನಲ್‌ ಸೆಕ್ಯುರಿಟಿ ಡೆಪಾಸಿಟರಿ ಲಿಮಿಟೆಡ್

*ಜಿಯೊ ಪೇಮೆಂಟ್ಸ್‌ ಬ್ಯಾಂಕ್

*ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌

*ಫಿನೊ ಪೇಮೆಂಟ್ಸ್‌ ಬ್ಯಾಂಕ್‌

*ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌

ಚಾಲ್ತಿಯಲ್ಲಿ ಇರುವ...

*ಜಿಯೊ ಪೇಮೆಂಟ್ಸ್‌ ಬ್ಯಾಂಕ್‌

*ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌

*ಫಿನೊ ಪೇಮೆಂಟ್ಸ್‌ ಬ್ಯಾಂಕ್‌

*ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌

ಎಸ್‌ಬಿಐ ವರದಿ ಹೇಳುವುದೇನು?

*ಈ ಬ್ಯಾಂಕ್‌ಗಳು ಸಂಪತ್ತು ಮತ್ತು ಹೊಣೆಗಾರಿಕೆ ವಿಷಯದಲ್ಲಿ ಕಠಿಣ ನಿಯಂತ್ರಣ ಕ್ರಮಗಳನ್ನು ಎದುರಿಸುತ್ತಿವೆ. ನಿರ್ಬಂಧಿತ ಕ್ರಮಗಳಿಂದಾಗಿ ವಾಣಿಜ್ಯ ಬ್ಯಾಂಕ್‌ಗಳಿಗೆ ಸ್ಪರ್ಧೆ ನೀಡಲು ಅವುಗಳಿಗೆ ಸರಿಸಮನಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ.

*ಆಧಾರ್‌ ಆಧಾರಿತ ಕಡಿಮೆ ವೆಚ್ಚದ ‘ನಿಮ್ಮ ಗ್ರಾಹಕರನ್ನು ತಿಳಿಯಿರಿ’ (ಕೆವೈಸಿ) ಸೌಲಭ್ಯ ಕಲ್ಪಿಸಿದರೆ ಈ ಮಾದರಿ ಬ್ಯಾಂಕಿಂಗ್‌ ವ್ಯವಸ್ಥೆ ಯಶಸ್ವಿಯಾಗಬಹುದು.

*ಮೂರನೇ ಸಂಸ್ಥೆಯ ಹಣಕಾಸು ಉತ್ಪನ್ನಗಳನ್ನು ಮಾರಾಟ ಮಾಡಲು ಆರ್‌ಬಿಐ ಅನುಮತಿ ನೀಡಿದರೆ ವಹಿವಾಟು ಲಾಭದಾಯಕವಾಗಲಿದೆ.

*ಖಾತೆಯಲ್ಲಿನ ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತವು ಸ್ವಯಂಚಾಲಿತವಾಗಿ ವಾಣಿಜ್ಯ ಬ್ಯಾಂಕ್‌ಗಳಿಗೆ ವರ್ಗಾವಣೆಗೊಳ್ಳುವ ಸೌಲಭ್ಯ ಕಲ್ಪಿಸಿದರೂ ‘ಪಿಬಿ’ಗಳಿಗೆ ಅನುಕೂಲವಾಗಲಿದೆ ಎಂದು ಎಸ್‌ಬಿಐ ವರದಿಯಲ್ಲಿ ಸಲಹೆ ನೀಡಲಾಗಿದೆ.

ಬಲವರ್ಧನೆಗೆ ಚಿಂತನೆ

ಪೇಮೆಂಟ್ಸ್‌ ಬ್ಯಾಂಕ್‌ಗಳಿಗೆ ಬಲ ತುಂಬಲು ಆರ್‌ಬಿಐ ಚಿಂತನೆ ನಡೆಸುತ್ತಿದೆ. ನಷ್ಟದಿಂದ ಹೊರತರಲು ಸಣ್ಣ ಹಣಕಾಸು ಬ್ಯಾಂಕ್‌ಗಳಾಗಿ ಪರಿವರ್ತನೆ ಹೊಂದಲು ಅವಕಾಶ ನೀಡುವ ಬಗ್ಗೆ ಪರಾಮರ್ಶೆ ನಡೆಸುತ್ತಿದೆ.

ಆರ್‌ಬಿಐ ವರದಿಯ ಪ್ರಕಾರ,2016–18ರಲ್ಲಿ ಪೇಮೆಂಟ್ಸ್‌ ಬ್ಯಾಂಕ್‌ಗಳ ನಿವ್ವಳ ನಷ್ಟ ₹ 242 ಕೋಟಿ ಇತ್ತು. 2017–18ರಲ್ಲಿ ನಷ್ಟದ ಪ್ರಮಾಣ₹ 517 ಕೋಟಿಗೆ ಏರಿಕೆಯಾಗಿದೆ. ಕಾರ್ಯಾಚರಣಾ ಲಾಭವು ₹ 241 ಕೋಟಿಗಳಿಂದ ₹ 522 ಕೋಟಿಗಳಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.