ADVERTISEMENT

ದರ ಏರಿಕೆ: ಜೀವನ ಸುಡುತ್ತಿರುವ ‘ಇಂಧನ’

ವಿಶ್ವನಾಥ ಎಸ್.
Published 31 ಆಗಸ್ಟ್ 2021, 22:24 IST
Last Updated 31 ಆಗಸ್ಟ್ 2021, 22:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್‌ ದರ ಏರಿಕೆಯುಸರಕು ಸಾಗಣೆ, ಸಾರ್ವಜನಿಕ ಸಾರಿಗೆ, ಆಹಾರ ವಸ್ತುಗಳ ದರ ಏರಿಕೆಗೆ ಕಾರಣವಾಗುತ್ತಿದ್ದು ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ದರವು ಲೀಟರಿಗೆ ₹ 100 ರ ಗಡಿ ದಾಡಿದೆ. ಡೀಸೆಲ್‌ ದರ ಕೆಲವು ಪ್ರದೇಶಗಳಲ್ಲಿ ₹ 100ನ್ನು ದಾಟಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ₹ 100ರ ಸಮೀಪಕ್ಕೆ ಬಂದಿದೆ.

‘ಕೋವಿಡ್‌ ಹಾಗೂ ಲಾಕ್‌ಡೌನ್‌ಗೂ ಮೊದಲು ನನಗೆ ಪ್ರತಿನಿತ್ಯ ಕಚೇರಿಗೆ ಹೋಗಿಬರಲು ಅಂದಾಜು ₹ 1,500 ಬೇಕಾಗುತ್ತಿತ್ತು. ಪೆಟ್ರೋಲ್ ಬೆಲೆಯಲ್ಲಿ ಶೇಕಡ 40ರಷ್ಟು ಹೆಚ್ಚಳ ಆಗಿರುವುದರ ಕಾರಣದಿಂದಾಗಿ ಈಗ ₹ 2,100 ಬೇಕಾಗುತ್ತಿದೆ’ ಎಂದು ಬೆಂಗಳೂರಿನ ರಾಜಾಜಿನಗರ ನಿವಾಸಿಯೊಬ್ಬರು ಬೆಲೆ ಏರಿಕೆಯ ಬಿಸಿ ತಮಗೆ ತಟ್ಟಿರುವ ಬಗೆಯನ್ನು ವಿವರಿಸಿದರು. ಈ ಅವಧಿಯಲ್ಲಿ ಅವರ ವೇತನ ಕಡಿತ ಆಗಿದೆ, ವೇತನ ಇನ್ನು ಯಾವಾಗ ಮೊದಲ ಸ್ಥಿತಿಗೆ ತಲುಪಬಹುದು ಎಂಬುದು ಅವರಿಗೂ ಗೊತ್ತಿಲ್ಲ.

ಇಂಧನ ದರ ಏರಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆಯ ಜೊತೆಗೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಎಕ್ಸೈಸ್‌ ಸುಂಕ ಮತ್ತು ರಾಜ್ಯಗಳು ವಿಧಿಸುತ್ತಿರುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಕೂಡ ಕಾರಣ.

ADVERTISEMENT

ಇಂಧನದ ಮೇಲಿನ ಸುಂಕ ಕೇಂದ್ರ, ರಾಜ್ಯಗಳಿಗೆ ವರಮಾನದ ಪ್ರಮುಖ ಮೂಲ. 2020ರ ಏಪ್ರಿಲ್‌ನಿಂದ 2021ರ ಮಾರ್ಚ್‌ವರೆಗಿನ ಅವಧಿಯಲ್ಲಿ ಪೆಟ್ರೋಲ್‌ ಮತ್ತು ಡಿಸೆಲ್ ಮೇಲಿನ ಎಕ್ಸೈಸ್‌ ಸುಂಕ ಸಂಗ್ರಹವು ₹ 3.35 ಲಕ್ಷ ಕೋಟಿಗೆ ಏರಿಕೆ ಆಗಿದೆ. ಅದಕ್ಕೂ ಹಿಂದಿನ ಆರ್ಥಿಕ ವರ್ಷದಲ್ಲಿ ಎಕ್ಸೈಸ್ ಸುಂಕ ಸಂಗ್ರಹವು ₹ 1.78 ಲಕ್ಷ ಕೋಟಿ ಆಗಿತ್ತು. ವರ್ಷದಿಂದ ವರ್ಷಕ್ಕೆ ಎಕ್ಸೈಸ್‌ ಸುಂಕ ಸಂಗ್ರಹ ಹೆಚ್ಚುತ್ತಲೇ ಇದ್ದು, ಕೇಂದ್ರಕ್ಕೆ ಬರುವ ವರಮಾನವೂ ಹೆಚ್ಚಾಗುತ್ತಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಆಗಿದ್ದ ಇಳಿಕೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಕಳೆದ ವರ್ಷ ಪೆಟ್ರೋಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಲೀಟರಿಗೆ ₹ 19.98ರಿಂದ ₹ 32.9ಕ್ಕೆ ಏರಿಸಿತು. ಅದೇ ರೀತಿ, ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಲೀಟರಿಗೆ ₹ 15.83ರಿಂದ ₹ 31.8ಕ್ಕೆ ಹೆಚ್ಚಿಸಿತು. ಈ ಏರಿಕೆಯ ಹೊರೆಯನ್ನು ಕಂಪನಿಗಳು ಇಂಧನ ದರವನ್ನು ಆಗಾಗ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ವರ್ಗಾಯಿಸಲಾರಂಭಿಸಿ ದವು. ತಮಿಳುನಾಡು ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್‌ ಮೇಲಿನ ತೆರಿಗೆ
ಯನ್ನು ಈಚೆಗೆ ₹ 3ರಷ್ಟು ತಗ್ಗಿಸಿದೆ. ಕರ್ನಾಟಕದಲ್ಲಿ ಈ ಬಗೆಯ ಕ್ರಮ ಜಾರಿಗೆ ಬಂದಿಲ್ಲ. ಕೇಂದ್ರ ಸರ್ಕಾರವು ತೈಲೋತ್ಪನ್ನಗಳ ಮೇಲಿನ ಸುಂಕ ಇಳಿಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.