ADVERTISEMENT

ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ: ಬೆಂಗಳೂರಿನಲ್ಲಿ ₹100 ದಾಟಿದ ಡೀಸೆಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2021, 3:41 IST
Last Updated 17 ಅಕ್ಟೋಬರ್ 2021, 3:41 IST
ಅಹಮದಾಬಾದ್‌ನ ಪೆಟ್ರೋಲ್‌ ಸ್ಟೇಷನ್‌ವೊಂದರಲ್ಲಿ ಕಾರ್ಯಮುಖರಾಗಿರುವ ಸಿಬ್ಬಂದಿ 
ಅಹಮದಾಬಾದ್‌ನ ಪೆಟ್ರೋಲ್‌ ಸ್ಟೇಷನ್‌ವೊಂದರಲ್ಲಿ ಕಾರ್ಯಮುಖರಾಗಿರುವ ಸಿಬ್ಬಂದಿ    

ನವದೆಹಲಿ: ಸರ್ಕಾರಿ ಸ್ವಾಮ್ಯ ತೈಲ ಮಾರಾಟ ಕಂಪನಿಗಳು ಭಾನುವಾರ ಸಹ ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರವನ್ನು ಪ್ರತಿ ಲೀಟರಿಗೆ 35 ಪೈಸೆಗಳಷ್ಟು ಹೆಚ್ಚಿಸಿವೆ. ಇದರಿಂದಾಗಿ ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರವು ₹110ರ ಗಡಿಗೆ ಸಮೀಪಸಿದರೆ, ಹೈದರಾಬಾದ್‌ನಲ್ಲಿ ₹110.09 ತಲುಪಿದೆ.

ಹಾಗೇ ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರವು ₹100 ದಾಟಿದ್ದು, ಪೆಟ್ರೋಲ್‌ ದರ ₹109.53 ಆಗಿದೆ. ಹೈದರಾಬಾದ್‌ನಲ್ಲಿ ಡೀಸೆಲ್‌ ₹103.08 ಮುಟ್ಟಿದೆ.

ಸತತ ನಾಲ್ಕನೇ ದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆಯಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹105.84 ಮತ್ತು ಡೀಸೆಲ್‌ ₹94.57 ಆಗಿದೆ. ಮುಂಬೈನಲ್ಲಿ ಪೆಟ್ರೋಲ್‌ 34 ಪೈಸೆ ಹೆಚ್ಚಳವಾಗಿ ₹111.77 ಮತ್ತು ಡೀಸೆಲ್‌ 37 ಪೈಸೆ ಹೆಚ್ಚಳವಾಗಿ ₹102.52 ಆಗಿದೆ.

ADVERTISEMENT

ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ದರ ಕ್ರಮವಾಗಿ ₹106.43, ₹97.68ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್‌ ₹103.01 ಮತ್ತು ಡೀಸೆಲ್‌ ₹98.92 ಇದೆ. ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ಇಂಧನ ದರವು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಆಗುತ್ತದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಅನುಗುಣವಾಗಿ ದೇಶದಲ್ಲಿ ಇಂಧನ ದರ ಹೆಚ್ಚಿಸಲಾಗಿದೆ. ಸೆಪ್ಟೆಂಬರ್‌ನಿಂದ ಈವರೆಗೆ ಪೆಟ್ರೋಲ್‌ ದರವನ್ನು 15 ಬಾರಿ ಮತ್ತು ಡೀಸೆಲ್‌ ದರವನ್ನು 18 ಬಾರಿ ಹೆಚ್ಚಿಸಲಾಗಿದೆ. ಈ ಅವಧಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 4.30 ಮತ್ತು ಡೀಸೆಲ್‌ ದರ ಲೀಟರಿಗೆ ₹ 5.6ರಷ್ಟು ಹೆಚ್ಚಾಗಿದೆ.

ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್‌ ದರವು ಈಗಾಗಲೇ ಲೀಟರಿಗೆ ₹ 100ನ್ನು ದಾಟಿ ಮಾರಾಟವಾಗುತ್ತಿದೆ. ಕರ್ನಾಟಕ, ಮಧ್ಯ ಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌, ಮಹಾರಾಷ್ಟ್ರ, ಛತ್ತೀಸಗಢ, ಬಿಹಾರ, ಕೇರಳ ಮತ್ತು ಲಡಾಖ್‌ನಲ್ಲಿ ಸಹ ಡೀಸೆಲ್‌ ದರ ಲೀಟರಿಗೆ ₹ 100ರ ಗಡಿ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.