ADVERTISEMENT

ಶತಕ ದಾಟಿದ ಪೆಟ್ರೋಲ್ ದರ; ಬಳ್ಳಾರಿ, ಶಿರಸಿಯಲ್ಲಿ ₹ 100ಕ್ಕಿಂತ ಹೆಚ್ಚಾದ ಬೆಲೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 19:31 IST
Last Updated 6 ಜೂನ್ 2021, 19:31 IST
ಹೊಸಪೇಟೆಯ ಬಂಕ್‌ನಲ್ಲಿ ಭಾನುವಾರ ಪೆಟ್ರೋಲ್‌ ಹಾಕಿಸಿಕೊಂಡ ಪೊಲೀಸ್‌ ಕಾನ್‌ಸ್ಟೆಬಲ್‌
ಹೊಸಪೇಟೆಯ ಬಂಕ್‌ನಲ್ಲಿ ಭಾನುವಾರ ಪೆಟ್ರೋಲ್‌ ಹಾಕಿಸಿಕೊಂಡ ಪೊಲೀಸ್‌ ಕಾನ್‌ಸ್ಟೆಬಲ್‌   

ಬೆಂಗಳೂರು/ಶಿರಸಿ/ಬಳ್ಳಾರಿ: ರಾಜ್ಯದ ಬಳ್ಳಾರಿ ಮತ್ತು ಶಿರಸಿಯಲ್ಲಿ ಪೆಟ್ರೋಲ್ ದರವು ಭಾನುವಾರ ₹ 100ರ ಗಡಿ ದಾಟಿದೆ. ಬಳ್ಳಾರಿಯಲ್ಲಿ ಲೀಟರ್ ಪೆಟ್ರೋಲ್ ದರ ₹ 100.08, ಶಿರಸಿಯಲ್ಲಿ ₹ 100.28 ಆಗಿದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ₹ 100ಕ್ಕಿಂತ ಹೆಚ್ಚಾಗಿರುವುದು ಇದೇ ಮೊದಲು.

ಪಶ್ಚಿಮ ಬಂಗಾಳ ಸೇರಿದಂತೆ ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆಗೆ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದ್ದ ಸಂದರ್ಭ ತೈಲ ಬೆಲೆ ಏರಿಕೆ ಆಗಿರಲಿಲ್ಲ. ಮೇ 4ರಿಂದ ಇದುವರೆಗೆ ಒಟ್ಟು 20 ಬಾರಿ ಬೆಲೆ ಏರಿಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಕಳೆದ ವರ್ಷದ ಜೂನ್‌ 6ರಂದು ಪೆಟ್ರೋಲ್‌ ದರ ಲೀಟರಿಗೆ ₹ 73.55ರಷ್ಟು ಇತ್ತು. ಭಾನುವಾರ ಲೀಟರ್ ಪೆಟ್ರೋಲ್ ₹ 98.26ಕ್ಕೆ ಏರಿಕೆ ಆಗಿದೆ. ಅಂದರೆ, ಒಂದು ವರ್ಷದ ಅವಧಿಯಲ್ಲಿ ಲೀಟರ್ ಪೆಟ್ರೋಲ್‌ ಬೆಲೆ ₹ 24.71ರಷ್ಟು ಏರಿಕೆ ಆದಂತಾಗಿದೆ.

ADVERTISEMENT

ಡೀಸೆಲ್‌ ದರವು ಬೆಂಗಳೂರಿನಲ್ಲಿ ಕಳೆದ ವರ್ಷದ ಜೂನ್‌ 6ರಂದು ಲೀಟರಿಗೆ ₹ 65.96 ಇದ್ದಿದ್ದು, ಭಾನುವಾರ ₹ 91.18ಕ್ಕೆ ಏರಿಕೆ ಆಗಿದೆ. ಒಂದು ವರ್ಷದಲ್ಲಿ ಲೀಟರ್‌ ಡೀಸೆಲ್‌ ದರ ₹ 25.22ರಷ್ಟು ಏರಿಕೆ ಆಗಿದೆ.

* ಪೆಟ್ರೋಲ್ ದರದಲ್ಲಿ ಶತಕ ಬಾರಿಸಿದ್ದೇ ಕೇಂದ್ರ ಸರ್ಕಾರದ ಸಾಧನೆ. ಜನವರಿಯಿಂದ ಇಲ್ಲಿಯವರೆಗೆ 48 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಸಿರುವ ಸರ್ಕಾರ, ಚುನಾವಣೆ ನಡೆದ ತಿಂಗಳಲ್ಲಿ ಮಾತ್ರ ಸುಮ್ಮನಿತ್ತು.‌ ಚುನಾವಣೆ ಮುಗಿದ ಬಳಿಕ ದರ ಏರಿಕೆಯ ಬಾರುಕೋಲು ಹಿಡಿದು ಜನ ಸಾಮಾನ್ಯರನ್ನು ಥಳಿಸಲು ಶುರು ಮಾಡಿದೆ.

- ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

* ಕೋವಿಡ್‌, ಲಾಕ್‌ಡೌನ್‌ನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದಾಯ ಕಡಿಮೆ ಆಗಿದೆ. ಸರ್ಕಾರಗಳಿಗೆ ಆದಾಯಕ್ಕೆ ಪೆಟ್ರೋಲ್, ಡೀಸೆಲ್ ಪ್ರಮುಖ ಮೂಲ. ತೈಲ ಬೆಲೆ ನಿಯಂತ್ರಣ ಸರ್ಕಾರದ ಕೈಯಲ್ಲೂ ಇಲ್ಲ. ಕಂಪನಿಗಳೇ ಅದನ್ನು ನಿರ್ಧರಿಸುತ್ತವೆ. ಆದರೂ ಸಾರ್ವಜನಿಕರ ಹಿತಾಸಕ್ತಿಯಿಂದ ಹೊರೆ ಕಡಿಮೆ ಮಾಡಲು ರಾಜ್ಯಗಳು ಮುಂದಾಗಬೇಕು

-ಎನ್‌.ರವಿಕುಮಾರ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

* ಬೆಲೆ ಹೆಚ್ಚಳದಿಂದ ಎಲ್ಲ ವಲಯದವರಿಗೂ ಆರ್ಥಿಕ ಹೊರೆ ಬೀಳಲಿದೆ. ಸರ್ಕಾರ ತೆರಿಗೆ ಕಡಿತ ಮಾಡಿ, ಬೆಲೆ ಇಳಿಸಬೇಕು

- ಅಶ್ವಿನ್‌ ಕೊತಂಬ್ರಿ, ಕಾರ್ಯದರ್ಶಿ, ಜಿಲ್ಲಾ ಪೆಟ್ರೋಲ್‌ ಬಂಕ್ ಸಂಘ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.