ಗ್ರೇಟರ್ ನೋಯ್ಡಾದಲ್ಲಿ ಬುಧವಾರ ಆರಂಭವಾದ ಸೆಮಿಕಾನ್ ಸಮಾವೇಶದ ವಸ್ತು ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇದ್ದರು
–ಪಿಟಿಐ ಚಿತ್ರ
ನವದೆಹಲಿ: ‘ಭಾರತವು ಅಲ್ಪಾವಧಿಯಲ್ಲಿ ಸೆಮಿಕಂಡಕ್ಟರ್ ತಯಾರಿಕಾ ವಲಯದಲ್ಲಿ ₹1.5 ಲಕ್ಷ ಕೋಟಿ ಬಂಡವಾಳವನ್ನು ಆಕರ್ಷಿಸಿದೆ. ವಿಶ್ವದಲ್ಲಿ ದೊರೆಯುವ ಪ್ರತಿ ಸೆಮಿಕಂಡಕ್ಟರ್ ಚಿಪ್ ಭಾರತದ್ದೇ ಆಗಿರಬೇಕೆಂಬುದು ಸರ್ಕಾರದ ಆಶಯವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬುಧವಾರ ಗ್ರೇಟರ್ ನೋಯ್ಡಾದಲ್ಲಿ ಆರಂಭವಾದ ಸೆಮಿಕಾನ್ 2024ಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
‘ನೀವು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ (ಭಾರತ) ಇದ್ದೀರಿ. 21ನೇ ಶತಮಾನದಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆ ಎದುರಾಗುವುದಿಲ್ಲ. ಚಿಪ್‌ಗಳ ಕೊರತೆಯಾದರೆ ಭಾರತವನ್ನು ಅವಲಂಬಿಸಬಹುದಾಗಿದೆ. ಜಗತ್ತಿಗೆ ಭಾರತವು ಇಂಥ ಭರವಸೆ ನೀಡುತ್ತದೆ’ ಎಂದರು.
ಪ್ರಸ್ತುತ ದೇಶದ ಎಲೆಕ್ಟ್ರಾನಿಕ್ಸ್ ವಲಯದ ಮಾರುಕಟ್ಟೆ ಮೌಲ್ಯವು ₹13 ಲಕ್ಷ ಕೋಟಿ ಇದೆ. ಈ ದಶಕದ ಅಂತ್ಯಕ್ಕೆ ₹42 ಲಕ್ಷ ಕೋಟಿಗೆ ಮುಟ್ಟುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
‘ಸ್ಮಾರ್ಟ್‌ಫೋನ್‌ನಿಂದ ಹಿಡಿದು ವಿದ್ಯುತ್‌ಚಾಲಿತ ವಾಹನ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ವರೆಗೂ ಸೆಮಿಕಂಡಕ್ಟರ್ ಚಿಪ್‌ಗಳು ಬಳಕೆಯಾಗುತ್ತವೆ. ಹಾಗಾಗಿ, ದೇಶೀಯವಾಗಿ ಈ ವಲಯದಲ್ಲಿ ಹೂಡಿಕೆಗೆ ಉತ್ತೇಜನ ನೀಡಲಾಗಿದೆ. ದೇಶದ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಚಿಪ್‌ಗಳ ಪೂರೈಕೆ ಸರಪಳಿಯನ್ನು ಬಲಗೊಳಿಸುವುದು ಅತ್ಯಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.
ಕೋವಿಡ್ ಸಂದರ್ಭದಲ್ಲಿ ಚೀನಾದಲ್ಲಿ ವಿಮಾನ ಹಾರಾಟ ಮತ್ತು ಕಾರ್ಖಾನೆಗಳು ಬಂದ್ ಆಗಿದ್ದವು. ಇದರಿಂದ ಚಿಪ್‌ಗಳ ಪೂರೈಕೆ ಸರಪಳಿಯ ಕೊಂಡಿ ಕಳಚಿ ಬಿದ್ದಿತು. ಹಾಗಾಗಿ, ಪೂರೈಕೆ ಸರಪಳಿಯನ್ನು ಸದೃಢಗೊಳಿಸುವುದು ಅತಿಮುಖ್ಯವಾಗಿದೆ. ಸೆಮಿಕಂಡಕ್ಟರ್ ಸೇರಿ ಇತರೆ ವಲಯಗಳಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಭಾರತ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
‘ಭಾರತದ ಸುಧಾರಣಾವಾದಿ ಆಡಳಿತ ಹಾಗೂ ಸ್ಥಿರ ನೀತಿಗಳು ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆಗೆ ಹೆಚ್ಚು ಉತ್ತೇಜನ ನೀಡುತ್ತವೆ’ ಎಂದರು.
ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವೆ ತಲೆದೋರಿರುವ ಬಿಕ್ಕಟ್ಟಿನಿಂದಾಗಿ ಚಿಪ್‌ಗಳ ಆಮದು ದುಬಾರಿಯಾಗಿದೆ. ಹಾಗಾಗಿ, ವಿಶ್ವದ ಹಲವು ದೇಶಗಳು ಚಿಪ್‌ಗಳ ತಯಾರಿಕೆಗೆ ಬಂಡವಾಳ ಹೂಡಿಕೆಗೆ ಮುಂದಾಗಿವೆ.
2026ರ ವೇಳೆಗೆ ದೇಶದ ಸೆಮಿಕಂಡಕ್ಟರ್ ವಲಯದ ಮಾರುಕಟ್ಟೆ ಮೌಲ್ಯವು ₹5.25 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ. ಸದ್ಯ ಈ ವಲಯದಲ್ಲಿ ಹೂಡಿಕೆಯಾಗಿರುವ ಬಂಡವಾಳದಲ್ಲಿ ಪ್ರತಿದಿನ 7 ಕೋಟಿ ಚಿಪ್‌ಗಳು ತಯಾರಿಸುವ ಗುರಿ ಹೊಂದಲಾಗಿದೆ.
ಮೂರ್ನಾಲ್ಕು ತಿಂಗಳೊಳಗೆ ಸೆಮಿಕಾನ್ 2.0 ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಗತ್ಯ ಸಿದ್ಧತೆ ಕೈಗೊಂಡಿದೆ– ಅಶ್ವಿನಿ ವೈಷ್ಣವ್ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.