ADVERTISEMENT

PM ಮೋದಿ ಅಮೆರಿಕ ಭೇಟಿಯಿಂದ ಉಭಯ ರಾಷ್ಟ್ರಗಳ ವ್ಯಾಪಾರ, ಹೂಡಿಕೆಗೆ ಬಲ: CII

ಪಿಟಿಐ
Published 15 ಫೆಬ್ರುವರಿ 2025, 14:53 IST
Last Updated 15 ಫೆಬ್ರುವರಿ 2025, 14:53 IST
<div class="paragraphs"><p>ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತುಕತೆ ನಡೆಸಿದರು  </p></div>

ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತುಕತೆ ನಡೆಸಿದರು

   

–ಪಿಟಿಐ ಚಿತ್ರ 

ನವದೆಹಲಿ: ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇತ್ತೀಚಿನ ಅಮೆರಿಕ ಭೇಟಿಯಿಂದಾಗಿ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ, ಹೂಡಿಕೆ, ರಕ್ಷಣಾ ಸಾಮರ್ಥ್ಯ ಹಾಗೂ ತಂತ್ರಜ್ಞಾನ ಪಾಲುದಾರಿಕೆಗೆ ಬಲ ಸಿಕ್ಕಂತಾಗಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (CII) ಹರ್ಷ ವ್ಯಕ್ತಪಡಿಸಿದೆ.

ADVERTISEMENT

ಈ ಕುರಿತು ಮಾತನಾಡಿರುವ ಸಿಐಐ ಮಹಾನಿರ್ದೇಶಕ ಚಂದ್ರಜೀತ್ ಬ್ಯಾನರ್ಜಿ,  ‘ಈ ಭೇಟಿಯು ಅತ್ಯಂತ ಫಲಪ್ರದವಾಗಿದೆ. ಜಂಟಿ ಹೇಳಿಕೆಗಳಲ್ಲಿ ಪ್ರಸ್ತಾಪಿಸಿರುವ ಹಲವು ವಿಷಯಗಳು ಹಾಗೂ ಬಹಳಷ್ಟು ಘೋಷಣೆಗಳು ಭಾರತ ಮತ್ತು ಅಮೆರಿಕದ ಬಾಂದವ್ಯ ವೃದ್ಧಿಗೆ ನೆರವಾಗಲಿದೆ. ಇದರಿಂದ ಭಾರತೀಯ ಕೈಗಾರಿಕೆ ಮತ್ತು ಆರ್ಥಿಕ ಪ್ರಗತಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ’ ಎಂದಿದ್ದಾರೆ.

‘ರಕ್ಷಣೆ, ಇಂಧನ, ಸೆಮಿಕಂಡಕ್ಟರ್‌, ಬಾಹ್ಯಾಕಾಶ ಹಾಗೂ ಭವಿಷ್ಯದ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್‌, ಅತ್ಯಾಧುನಿಕ ಉಪಕರಣಗಳು ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಪಾಲುದಾರಿಕೆ ಇನ್ನಷ್ಟು ಬಲಗೊಳ್ಳಲಿದೆ. ಎರಡೂ ರಾಷ್ಟ್ರಗಳ ಖಾಸಗಿವಲಯಗಳು ಮತ್ತಷ್ಟು ಬೆಳವಣಿಗೆ ಕಾಣಲಿವೆ. ಭಾರತದಲ್ಲಿ ತಯಾರಿಕಾ ವಲಯ ವಿಸ್ತಾರಗೊಳ್ಳಲಿದೆ. ವಿದೇಶಿ ಬಂಡವಾಳ ಹರಿದುಬರಲಿದೆ. ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ’ ಎಂದಿದ್ದಾರೆ.

‘ಮೊದಲ ಹಂತದಲ್ಲಿ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಒಪ್ಪಂದವು ಸದ್ಯ ಇರುವ ಅಡೆತಡೆಗಳನ್ನು ನಿವಾರಿಸಿ, ಮಾರ್ಗದರ್ಶಿ ಪ್ರಕ್ರಿಯೆಗಳನ್ನು ಸುಗಮಗೊಳಿಸಲಿದೆ. ಜತೆಗೆ ದ್ವಿಮುಖ ವ್ಯಾಪಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಲವಾದ ಅಡಿಪಾಯ ಹಾಕಲಿದೆ. 2030ರ ಹೊತ್ತಿಗೆ 500 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ವಹಿವಾಟು ನಡೆಯುವ ಸಾಧ್ಯತೆ ಇದೆ’ ಎಂದಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಪರಮಾಣು ಇಂಧನ ಘಟಕಗಳ ಕುರಿತ ಚರ್ಚೆಯಿಂದಾಗಿ ಕೇಂದ್ರ ಸರ್ಕಾರವು ಇತ್ತೀಚೆಗೆ ಘೋಷಿಸಿದ 2047ರೊಳಗಾಗಿ 100 ಗಿಗಾ ವಾಟ್‌ ಗುರಿಯನ್ನು ತಲುಪಲು ನೆರವಾಗಲಿದೆ. ಈ ಭೇಟಿಯಿಂದಾಗಿ ಭಾರತದ ವಿಶಾಲ ಆರ್ಥಿಕ ಗುರಿಯನ್ನು ತಲುಪಲು ಅನುಕೂಲವಾಗಲಿದೆ. ತಂತ್ರಜ್ಞಾನ ಮತ್ತು ಇಂಧನ ವಲಯದ ಆರ್ಥಿಕ ಪ್ರಗತಿಗೆ ಉಭಯ ರಾಷ್ಟ್ರಗಳ ಈ ಒಪ್ಪಂದ ನೆರವಾಗಲಿದೆ’ ಎಂದು ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.