ADVERTISEMENT

₹35,440 ಕೋಟಿ ಮೊತ್ತದ ಎರಡು ಕೃಷಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಪಿಟಿಐ
Published 11 ಅಕ್ಟೋಬರ್ 2025, 14:37 IST
Last Updated 11 ಅಕ್ಟೋಬರ್ 2025, 14:37 IST
<div class="paragraphs"><p>ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಜೊತೆ ಮಾತುಕತೆ ನಡೆಸಿದರು</p></div>

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಜೊತೆ ಮಾತುಕತೆ ನಡೆಸಿದರು

   

ಪಿಟಿಐ ಚಿತ್ರ

ನವದೆಹಲಿ: ಒಟ್ಟು ₹35,440 ಕೋಟಿ ಮೊತ್ತದ ಎರಡು ಕೃಷಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು. ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದ ಒಂದು ಯೋಜನೆ ಕೂಡ ಇದರಲ್ಲಿ ಸೇರಿದೆ. 

ADVERTISEMENT

ಆಮದು ಮೇಲಿನ ಅವಲಂಬನೆ ಕಡಿಮೆ ಮಾಡಲು ಹಾಗೂ ಜಾಗತಿಕ ಬೇಡಿಕೆಗೆ ಸ್ಪಂದಿಸಲು ರೈತರು ಉತ್ಪಾದಕತೆಯನ್ನು ಹೆಚ್ಚಿಸಬೇಕು ಎಂದು ಮೋದಿ ಅವರು ಕರೆ ನೀಡಿದರು.

ತಮ್ಮ ನೇತೃತ್ವದ ಸರ್ಕಾರದ ಆಡಳಿತ ಅವಧಿಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಆಡಳಿತ ಅವಧಿಯೊಂದಿಗೆ ಹೋಲಿಸಿದ ಮೋದಿ ಅವರು, ‘ವಿರೋಧ ಪಕ್ಷದ ನಿರ್ಲಕ್ಷ್ಯವು ಕೃಷಿ ವ್ಯವಸ್ಥೆಯು ದುರ್ಬಲಗೊಳ್ಳಲು ಕಾರಣವಾಯಿತು. ಬೇರೆ ಬೇರೆ ಇಲಾಖೆಗಳು ಪರಸ್ಪರ ಸಮನ್ವಯವಿಲ್ಲದೆ ಬೇರೆ ಬೇರೆ ದಿಕ್ಕುಗಳಲ್ಲಿ ಕೆಲಸ ಮಾಡುತ್ತಿದ್ದವು’ ಎಂದು ದೂರಿದರು.

ಪ್ರಧಾನಿಯವರು ಚಾಲನೆ ನೀಡಿದ ಎರಡೂ ಯೋಜನೆಗಳಿಗೆ ಕೇಂದ್ರ ಸಂಪುಟವು ಈಗಾಗಲೇ ಅನುಮೋದನೆ ನೀಡಿದ್ದು, ಮುಂಬರುವ ಹಿಂಗಾರು ಬಿತ್ತನೆ ಅವಧಿಯಿಂದ 2030–31ರವರೆಗೆ ಇವು ಜಾರಿಯಲ್ಲಿ ಇರಲಿವೆ. ಈ ಯೋಜನೆಗಳು ದೇಶದ ಲಕ್ಷಾಂತರ ಮಂದಿ ರೈತರ ಹಣೆಬರಹವನ್ನು ಬದಲಿಸಲಿವೆ ಎಂದು ಮೋದಿ ಹೇಳಿದ್ದಾರೆ.

ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ಆಹಾರ ಸಂಸ್ಕರಣಾ ವಲಯಗಳಿಗೆ ಸೇರಿದ ಒಟ್ಟು ₹5,450 ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಕೂಡ ಪ್ರಧಾನಿಯವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು. ₹815 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

‘ಸ್ವಾತಂತ್ರ್ಯಾನಂತರ ನೀವು (ರೈತರು) ದೇಶವನ್ನು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿಸಿದ್ದೀರಿ. ಈಗ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವಲ್ಲಿ ಮಹತ್ವದ ಪಾತ್ರ ಹೊಂದಿದ್ದೀರಿ. ನಾವು ಆಹಾರ ಧಾನ್ಯಗಳನ್ನು ಜಾಗತಿಕ ಮಾರುಕಟ್ಟೆಗಾಗಿಯೂ ಉತ್ಪಾದಿಸಬೇಕಿದೆ’ ಎಂದು ಮೋದಿ ಅವರು ಹೇಳಿದರು. ಜಾಗತಿಕ ಮಟ್ಟದಲ್ಲಿ ಬೇಡಿಕೆ ಇರುವ ಬೆಳೆಗಳ ಮೇಲೆ ಗಮನ ನೀಡುವಂತೆ ಅವರು ರೈತರಿಗೆ ಕರೆ ನೀಡಿದರು.

ಹೊಸದಾಗಿ ಆರಂಭಿಸಿರುವ ಎರಡು ಯೋಜನೆಗಳು ಆಮದು ಕಡಿಮೆ ಮಾಡುವಲ್ಲಿ ಹಾಗೂ ರಫ್ತು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದರು.

ಗೋಧಿ ಮತ್ತು ಭತ್ತದ ಆಚೆಗೂ ರೈತರು ಗಮನ ನೀಡಬೇಕು. ದ್ವಿದಳ ಧಾನ್ಯಗಳನ್ನು ಬೆಳೆದು, ಪ್ರೊಟೀನ್‌ ಲಭ್ಯತೆ ಚೆನ್ನಾಗಿ ಆಗುವಂತೆ ರೈತರು ನೋಡಿಕೊಳ್ಳಬೇಕು ಎಂದು ಹೇಳಿದರು.

ಪಿಎಂ–ಡಿಡಿಕೆವೈ ಯೋಜನೆಯು ಬೇರೆ ಬೇರೆ ಸಚಿವಾಲಯಗಳ ಅಡಿಯಲ್ಲಿನ 36 ಯೋಜನೆಗಳನ್ನು ಒಂದೆಡೆ ತರುತ್ತದೆ. ಈ ಯೋಜನೆಯು ಉತ್ಪಾದಕತೆ ಹೆಚ್ಚಿಸಲು, ಬೆಳೆ ವೈವಿಧ್ಯ ಸಾಧಿಸಲು, ನೀರಾವರಿ ಮತ್ತು ದಾಸ್ತಾನು ಸೌಲಭ್ಯ ಸುಧಾರಿಸಲು ಹಾಗೂ ಸಾಲದ ಲಭ್ಯತೆ ಹೆಚ್ಚಿಸಲು ಗಮನ ನೀಡುತ್ತದೆ ಎಂದು ಹೇಳಿದರು.

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್, ಕೃಷಿ ಖಾತೆ ರಾಜ್ಯ ಸಚಿವ ಭಗೀರಥ ಚೌಧರಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.